ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟ ಮತ್ತು ಭೂಕುಸಿತದಿಂದಾಗಿ ಈಗಾಗಲೇ 80ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಆದರೆ ಮಂಡಿ ಜಿಲ್ಲೆಯ ಸಿಯಾಥಿ ಗ್ರಾಮದಲ್ಲಿ ನಡೆದ ವಿಶಿಷ್ಟ ಘಟನೆ ಗಂಭೀರ ದುರಂತವೊಂದನ್ನು ತಪ್ಪಿಸಿದೆ. ಇಲ್ಲಿ ಸಾಕು ನಾಯಿಯ ಬೊಗಳಾಟವೇ 67 ಜನರ ಪ್ರಾಣ ಉಳಿಸಿದ್ದೆಂಬುದೇ ಚಕಿತಗೊಳಿಸುವ ವಿಚಾರವಾಗಿದೆ.
ಜೂನ್ 30ರ ಮಧ್ಯರಾತ್ರಿ, ಧರಂಪುರದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಈ ಸಂದರ್ಭದಲ್ಲಿ ನರೇಂದ್ರ ಎಂಬವರ ಮನೆಯಲ್ಲಿದ್ದ ನಾಯಿ ಅಸಾಮಾನ್ಯವಾಗಿ ಬೊಗಳತೊಡಗಿತು. ನಾಯಿಯ ಬದಲಾಗಿದ ನಡವಳಿಕೆಯಿಂದ ಅನುಮಾನಗೊಂಡ ನರೇಂದ್ರ ಎಚ್ಚರಗೊಂಡು ಮನೆಯ ಗೋಡೆಯ ಬಳಿ ತೆರಳಿದಾಗ ಬೃಹತ್ ಬಿರುಕು ಕಾಣಿಸಿಕೊಂಡಿತು. ಅದರಲ್ಲಿಯೂ ನೀರು ನುಗ್ಗತೊಡಗಿದ ದೃಶ್ಯ ನೋಡಿ ಅವರು ತಕ್ಷಣ ಕುಟುಂಬದ ಎಲ್ಲರನ್ನೂ ಎಬ್ಬಿಸಿ ಹೊರ ಕರೆದರು.
ನಂತರ ಸಮೀಪದ ಮನೆಗಳಲ್ಲಿದ್ದವರಿಗೂ ಎಚ್ಚರಿಸಿ, ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕಳಿಸಿದರು. ಕೆಲವೇ ನಿಮಿಷಗಳಲ್ಲಿ ಮನೆಗಳು ಸಂಪೂರ್ಣವಾಗಿ ಕುಸಿದು ಹೋದವು. ಈ ಅಪರೂಪದ ಯತ್ನದಿಂದ 20 ಕುಟುಂಬಗಳ 67 ಜನರು ಬದುಕುಳಿಯುವ ಭಾಗ್ಯವಾಯಿತು.
ಈಗ ಅವರು ತ್ರಿಯಂಬಲ ಗ್ರಾಮದ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಒಂದು ನಾಯಿ ಸಮಯಕ್ಕೆ ನೀಡಿದ ಎಚ್ಚರಿಕೆ ಇಡೀ ಹಳ್ಳಿಯ ಪ್ರಾಣ ಉಳಿಸಿರುವ ಅಪರೂಪದ ಘಟನೆ ಇದು.