ಮಂಡ್ಯ: ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳದಲ್ಲಿ ಮೂರುವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಮಂಡ್ಯ 2ನೇ ಜಿಲ್ಲಾ ಸೆಷನ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
2023ರ ಡಿ.11 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಅದೇ ಗ್ರಾಮದ ಶಿವಣ್ಣ (59) ಎಂಬಾತ ತಿಂಡಿ ಕೊಡಿಸುವುದಾಗಿ ಪುಸಲಾಯಿಸಿ ಅಲ್ಲೇ ಪಕ್ಕದಲ್ಲಿದ್ದ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಅಷ್ಟೇ ಅಲ್ಲದೆ ಮನೆಯಲ್ಲಿ ಯಾರಿಗೂ ಹೇಳದಂತೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ. ಇತ್ತ ಮನೆಗೆ ಓಡಿ ಬಂದ ಬಾಲಕಿ ಆರೋಪಿಯ ನೀಚ ಕೃತ್ಯದ ಬಗ್ಗೆ ತಿಳಿಸಿದ್ದಾಳೆ. ಇದರಿಂದ ಸಿಟ್ಟಾದ ಸಂತ್ರಸ್ತ ಬಾಲಕಿಯ ತಾಯಿ ಕೃಷ್ಣರಾಜ ಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಾಯಿಯ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಶಿವಣ್ಣನ ಬಂಧಿಸಿ ಪೋಕ್ಸೋ ಕಾಯ್ದೆ 2012ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಆರೋಪಿಯ ವಿರುದ್ದ ದೋಷರೂಪ ಪಟ್ಟಿಯನ್ನು ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಇದೀಗ ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದಿಲೀಪ್ ಕುಮಾರ್ ಅವರಿದ್ದ ಪೀಠವು ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.