ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ವಿವಿಧ ಭಾಗಗಳಲ್ಲಿ ತರಕಾರಿ, ಹೂವು ಮತ್ತು ಹಣ್ಣುಗಳ ವ್ಯಾಪಾರ ಮಾಡುತ್ತಿರುವವರಿಗೆ ಪುರಸಭೆ ವತಿಯಿಂದ ನಿರ್ಮಾಣ ಮಾಡುತ್ತಿರುವ ಕೃಷ್ಣರಾಜ ತರಕಾರಿ ಮಾರುಕಟ್ಟೆಯ ಸಂಕುಲದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಡಿ.ಶಿವುನಾಯಕ್ ಹೇಳಿದರು.
ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿಯೊಂದಿಗೆ ನೂತನವಾಗಿ ನಿರ್ಮಾಣ ಮಾಡುತ್ತಿರುವ ಕೃಷ್ಣರಾಜ ತರಕಾರಿ ಮಾರುಕಟ್ಟೆಯ ಸಂಕುಲ ಪರಿಶೀಲಿಸಿ ಮಾತನಾಡಿದ ಅವರು ಹಳೆಯ ತರಕಾರಿ ಸಂಕುಲದಲ್ಲಿ ೫೦ ಮಂದಿಗೆ ಮತ್ತು ಹೊಸ ಸಂಕುಲದಲ್ಲಿ ೫೦ ಮಂದಿ ವ್ಯಾಪಾರ ಮಾಡಲು ಅವಕಾಶ ಇದ್ದು ಇವುಗಳನ್ನು ಆಧ್ಯತೆಯ ಮೇರೆಗೆ ನಿಗದಿಪಡಿಸಲಾಗುತ್ತದೆ ಎಂದರು.
ಈ ಹಿಂದಿನಿoದ ಪಟ್ಟಣದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವವರಿಗೆ ಮೊದಲ ಪ್ರಾಧಾನ್ಯತೆ ನೀಡಲಿದ್ದು ಮಾರುಕಟ್ಟೆಯಲ್ಲಿ ತರಕಾರಿ, ಹೂವು ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಜಾಗವನ್ನು ವಾರ್ಷಿಕ ಹರಾಜು ಮಾಡಿದ ನಂತರ ಲಾಟರಿ ಮೂಲಕ ವ್ಯಾಪಾರಿಗಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಹಳೆ ತರಕಾರಿ ಸಂಕುಲದ ಜತೆಗೆ ಹೊಸ ತರಕಾರಿ ಸಂಕುಲ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಅವರು ಅನುದಾನ ನೀಡಿದ್ದು ಇದರ ಜತೆಗೆ ಪಟ್ಟಣದ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಕೊಡಿಸಿ ಜನಪರವಾದ ಕೆಲಸ ಮಾಡಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಅವರನ್ನು ಕೋರಿದ್ದೇವೆ ಎಂದು ನುಡಿದರು.
ತರಕಾರಿ ಸಂಕುಲಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರ ಮಾಡುವುದರಿಂದ ಬಜಾರ್ ರಸ್ತೆ, ಪುರಸಭೆ ವೃತ್ತ, ಗರುಡಗಂಭದ ವೃತ್ತ ಸೇರಿದಂತೆ ಇತರ ಬಾಗಗಳಲ್ಲಿ ವ್ಯಾಪಾರ ಮಾಡುವವರಿಗೆ ಅನುಕೂಲವಾಗಲಿದ್ದು ಇದರ ಜತೆಗೆ ಸಂಚಾರ ವ್ಯವಸ್ಥೆಯು ಉತ್ತಮವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕೆಲಸ ಮಾಡಿದ ನಂತರ ಪುರಸಭೆ ವೃತ್ತವನ್ನು ಆದುನೀಕರಣ ಮಾಡಿ ಅಲ್ಲಿ ಕಾವೇರಿ ಮಾತೆಯ ಪ್ರತಿಮೆ ಸ್ಥಾಪನೆ ಮಾಡಲು ತೀರ್ಮಾನಿಸಿದ್ದು ಶೀಘ್ರದಲ್ಲಿಯೆ ಕಾಮಗಾರಿ ಆರಂಭಿಸುವ ಮಾತುಗಳನ್ನಾಡಿದ ಅಧ್ಯಕ್ಷರು ಪುರಸಭೆ ಬಯಲು ರಂಗ ಮಂದಿರದ ಆವರಣವನ್ನು ಸಮತಟ್ಟು ಮಾಡಿ ಅಲ್ಲಿಯೂ ಸಾರ್ವಜನಿಕರಿಗೆ ಅನುಕೂಲವಾಗುವ ಅಭಿವೃದ್ದಿ ಕೆಲಸ ಮಾಡುತ್ತೇವೆಂದರು.
ಪುರಸಭೆ ಸದಸ್ಯರಾದ ನಟರಾಜು, ಸಿ.ಶಂಕರ್, ಮಾಜಿ ಸದಸ್ಯ ಕೆ.ವಿನಯ್, ಯುವ ಕಾಂಗ್ರೆಸ್ ಮುಖಂಡ ಆದರ್ಶ, ಮುಖಂಡ ನವೀದ್, ಪುರಸಭೆ ಕಂದಾಯಾಧಿಕಾರಿ ರಮೇಶ್ ಮತ್ತಿತರರು ಇದ್ದರು.