ಚಂಡೀಗಢ: ‘ಟರ್ಬನ್ಡ್ ಟೊರ್ನಾಡೊ’ ಎಂಬ ಹೆಸರಿನಲ್ಲಿ ಖ್ಯಾತಿ ಪಡೆದ 114 ವರ್ಷದ ಮ್ಯಾರಥಾನ್ ಪಿತಾಮಹ ಫೌಜಾ ಸಿಂಗ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತ ಮಾಡಿದ ಆರೋಪಿ ಅನಿವಾಸಿ ಭಾರತೀಯ (NRI) ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಂಗ್ ಜಲಂಧರ್ನಲ್ಲಿರುವ ತಮ್ಮ ಮನೆ ಹತ್ತಿರ ಸಂಜೆ ವಾಕ್‌ಗಾಗಿ ಹೊರಟಿದ್ದ ವೇಳೆ ಫಾರ್ಚೂನರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಧಿಲ್ಲೋನ್ ಕೆನಡಾದ ನಿವಾಸಿಯಾಗಿದ್ದು, ಇತ್ತೀಚೆಗಷ್ಟೇ ಭಾರತಕ್ಕೆ ಆಗಮಿಸಿದ್ದರು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಾರು ಗುರುತಿಸಲ್ಪಟ್ಟಿದ್ದು, ತನಿಖೆ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಕಾರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
2000ರಲ್ಲಿ ಮ್ಯಾರಥಾನ್ ಓಟ ಪ್ರಾರಂಭಿಸಿದ್ದ ಫೌಜಾ ಸಿಂಗ್, 8 ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಜನನ ಪ್ರಮಾಣಪತ್ರ ಇಲ್ಲದ ಕಾರಣ ಅವರು ಗಿನ್ನೆಸ್ ದಾಖಲೆಗೆ ಪಾತ್ರರಾಗಿಲ್ಲವಾದರೂ, ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರರೆಂದು ಗುರುತಿಸಲ್ಪಟ್ಟಿದ್ದರು.