ಎಚ್.ಡಿ.ಕೋಟೆ: ರಾಜ್ಯದಲ್ಲಿ ಪ್ರಥಮವಾಗಿ ಭರ್ತಿಯಾಗುವ ಜಲಾಶಯ ಎಂಬ ಖ್ಯಾತಿಗಳಿಸಿರುವ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸುವ ಹಿನ್ನೆಲೆ ಜಲಾಶಯ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಜಲಾಶಯದ ಸುತ್ತಲೂ ಗಿಡ, ಗಂಟೆ ತೆಗೆದು ಸ್ವಚ್ಛಗೊಳಿಸುವ ಸಿದ್ಧತೆಯಲ್ಲಿ ಕಾರ್ಮಿಕರು ನಿರತರಾಗಿದ್ದು, ಜಲಾಶಯಕ್ಕೆ ಸುಣ್ಣ, ಬಣ್ಣ ಬಳಿದು, ಹಸಿರು ತೋರಣಗಳಿಂದ ಸಿಂಗರಿಸುವುದರ ಜೊತೆಗೆ ಜಲಾಶಯವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
84 ಅಡಿಗಳ ಸಾಮರ್ಥ್ಯ ಹೊಂದಿರುವ ಜಲಾಶಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಜೂ.ಕೊನೆಯ ವಾರದಲ್ಲಿಯೇ ಭರ್ತಿಯಾಗಿತ್ತು, ಮೈಸೂರು, ಬೆಂಗಳೂರಿನ ಜನತೆಗೆ ಕುಡಿಯುವ ನೀರೊದಗಿಸುವ ಜೊತೆಗೆ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಲಕ್ಷಾಂತರ ರೈತರ ನೆರವಿಗೆ ಕಬಿನಿ ಎಡದಂಡೆ, ಬಲದಂಡೆ ನಾಲೆಗಳ ಮೂಲಕ ಕೃಷಿ ಚಟುವಟಿಕೆಗೆ ನೆರವಾಗಿದೆ.
ಜಲಾಶಯ ಭರ್ತಿಯಾದ ಸಂದರ್ಭ ಪ್ರತಿ ವರ್ಷ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಹಾಗೂ ಕಬಿನಿ ಜಲಾಶಯಕ್ಕೆ ರಾಜ್ಯದ ಮುಖ್ಯಮಂತ್ರಿ ಒಂದೇ ದಿನ ಬಾಗಿನ ಅರ್ಪಿಸುವ ಸಂಪ್ರದಾಯವಿತ್ತು, ಪ್ರಸಕ್ತ ಸಾಲಿನಲ್ಲಿ ಈ ಸಂಪ್ರದಾಯದಲ್ಲಿ ಬದಲಾವಣೆಯಾಗಿ ಜು.1ರಂದು ಪ್ರಥಮವಾಗಿ ಕೆ.ಆರ್.ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ ಕಬಿನಿ ಜಲಾಶಯಕ್ಕೆ ಬರದೆ ಹಿಂದಿರುಗಿದ್ದು, ಕಾವೇರಿಗೆ ಬೆಣ್ಣೆ, ಕಬಿನಿಗೆ ಸುಣ್ಣ ಎಂಬಂತೆ ತಾಲೂಕಿನ ಜನತೆಯಿಂದ ವ್ಯಾಪಕ ಟೀಕೆಗೆ ಕಾರಣವಾಗಿತ್ತು.
ಇದನ್ನರಿತು ಸದ್ಯದಲ್ಲಿಯೇ ಮುಖ್ಯಮಂತ್ರಿಗಳ ದಿನಾಂಕ ನಿಗದಿಗೊಳಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದರು. ಇದರಂತೆ ನಾಳೆ ಬೆ.10 ಗಂಟೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿದೆ.

ಬೃಂದಾವನ ನಿರ್ಮಾಣ ವಿಷಯ ಮುನ್ನೆಲೆಗೆ ಬರುವ ಸಾಧ್ಯತೆ : ಕೆ.ಆರ್.ಎಸ್ ಮಾದರಿಯಲ್ಲಿ ಕಬಿನಿಯಲ್ಲಿ 50 ಲಕ್ಷ ರೂ, ವೆಚ್ಚದಲ್ಲಿ ಬೃಂದಾವನ ನಿರ್ಮಾಣ ಮಾಡಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಈ ಹಿಂದೆ ಭರವಸೆ ನೀಡಿದ್ದರು. ಆದರೆ, ಪ್ರತಿ ವರ್ಷ ಬಾಗಿನ ಅರ್ಪಿಸಿ ತೆರಳುತ್ತಿದ್ದ ಮುಖ್ಯಮಂತ್ರಿ ಯಾವುದೇ ಆಶ್ವಾಸನೆ ನೀಡಿರಲಿಲ್ಲ. ಆದ್ದರಿಂದ ಈ ಭಾಗದ ಬಹುದಿನಗಳ ಕನಸು ನನಸಾಗದೆ ಉಳಿದಿದೆ. ಸಿಎಂ, ಸಚಿವ ಸೇರಿದಂತೆ ಹಲವರು ಜಿಲ್ಲೆಯವರೆ ಆದ್ದರಿಂದ ಕ್ಷೇತ್ರದ ಜನರ ಮನವಿಗೆ ಇನ್ನಾದರೂ ಸ್ಪಂದಿಸುವರೆ ಎಂಬ ನಿರೀಕ್ಷೆಯಲ್ಲಿ ತಾಲೂಕಿನ ಜನರಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇಪ್ಪ ಸೇರಿದಂತೆ ಸಚಿವ ಸಂಪುಟದ ಸಹದ್ಯೋಗಿಗಳು, ಶಾಸಕ ಅನಿಲ್ ಚಿಕ್ಕಮಾದು, ದರ್ಶನ್ ದ್ರುವನಾರಾಯಣ್, ಡಿ.ರವಿಶಂಕರ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.