ಮೈಸೂರು: ಎಲ್ಲಾ ಜೀವಿಗಳ ಜೀವನ ಅನುಕೂಲಕ್ಕಾಗಿ ಪ್ರಕೃತಿ ಸಂಪನ್ಮೂಲ ನೀಡಿದೆ. ಸಂಪನ್ಮೂಲಗಳ ವೈವಿಧ್ಯತೆ, ನೈಸರ್ಗಿಕವಾಗಿ ದೊರೆತಿರುವ ಸಮತೋಲಿತ ಪರಿಸರ ವ್ಯವಸ್ಥೆಯನ್ನು ಸುರಕ್ಷಿತ ಮತ್ತು ಸಂತೋಷದ ಜೀವನವನ್ನು ಕಳೆಯಲು ಬಳಸಿಕೊಳ್ಳಬೇಕು. ಆದರೆ, ಮನುಷ್ಯರು ಅತಿ ದುರಾಸೆಯಿಂದ ಐಷಾರಾಮಿ ಜೀವನಕ್ಕಾಗಿ ಸಂಪನ್ಮೂಲಗಳನ್ನು ತಮಗೋಸ್ಕರ ಸೀಮಿತಗೊಳಿಸಿಕೊಂಡು ಪ್ರಕೃತಿಯ ಸೌಂದರ್ಯ ನಾಶಪಡಿಸುತ್ತಿದ್ದಾರೆ ಎಂದು ಹಾಸನ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ತಿಳಿಸಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗ ಮೈಸೂರು ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಜಿ೨೦ ಜನ ಭಾಗಿದಾರಿ ಕಾರ್ಯಕ್ರಮದಡಿಯಲ್ಲಿ ಜೀವವೈವಿಧ್ಯ ಸಂರಕ್ಷಣೆ, ತಂತ್ರಗಳು ಮತ್ತು ಸವಾಲುಗಳು ಎಂಬ ವಿಷಯ ಕುರಿತು ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಜೀವಿ ಶಾಂತಿಯುತವಾಗಿ ಬದುಕುವ ಪರಿವೆಯನ್ನು ಮಾನವ ಬೆಳೆಸಿಕೊಳ್ಳಬೇಕು. ಭವಿಷ್ಯದ ಪೀಳಿಗೆಗೆ ಜೀವ ವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಬಹಳ ಅಗತ್ಯವಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಕೆ.ಎನ್.ಅಮೃತೇಶ್ ಮಾತನಾಡಿ, ವೈವಿಧ್ಯಮಯ ಸಸ್ಯಸಂಕುಲ ಮತ್ತು ಎಲ್ಲಾ ಜೀವಿಗಳನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಮಾಜ ಸೇರಿದಂತೆ ವ್ಯಾಪಕ ಸಂಶೋಧನೆಯಲ್ಲಿ ತೊಡಗಿರುವ ಸಮುದಾಯ ಜೀವ ವೈವಿಧ್ಯತೆಯ ಅಪಾರ ನಷ್ಟ್ಟ ತಡೆಯಲು ಜಾಗರೂಕತೆ ಬೆಳೆಸಿಕೊಳ್ಳಬೇಕು. ಹಿಮಾಲಯ, ಪಶ್ಚಿಮ ಘಟ್ಟಗಳು ಪ್ರದೇಶಗಳಲ್ಲಿ ವೈವಿಧ್ಯಮಯ ಸಸ್ಯ ಕುಟುಂಬದ ಅಸ್ತಿತ್ವ ವಿವರಿಸಿದರು.
ನಂತರ ನಡೆದ ಮೊದಲ ಅಧಿವೇಶನದಲ್ಲಿ ವಿಜ್ಞಾನಿ ಡಾ.ಎಂ.ಯು.ಷರೀಫ್ ಜೀವವೈವಿಧ್ಯ ಸಂರಕ್ಷಣೆ-ಬಿಎಸ್‌ಐ ದೃಷ್ಟಿಕೋನ ವಿಷಯದ ಕುರಿತು ಮಾತನಾಡಿದರು. ಇನ್ನೊಂದು ಅಧಿವೇಶನದಲ್ಲಿ ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ಆರ್.ರಾಘವೇಂದ್ರರಾವ್ ೨೧ನೇ ಶತಮಾನದ ಮಾನವ ಕಲ್ಯಾಣಕ್ಕಾಗಿ ಜೈವಿಕ ವೈವಿಧ್ಯತೆ ಮತ್ತು ಜೈವಿಕ ನಿರೀಕ್ಷೆಗಳು-ಕಾಳಜಿಗಳು, ಕಾರ್ಯತಂತ್ರಗಳು ಮತ್ತು ಸವಾಲುಗಳು ವಿಷಯ ಕುರಿತು ಉಪನ್ಯಾಸ ನೀಡಿದರು.
ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರೊ.ಬಿಳಿಗಿರಿರಂಗ, ಡಾ.ಸಿಂಧು.ಜಿ.ಎಂ ಇದ್ದರು.