ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕರ್ನಾಟಕ ಹೈಕೋರ್ಟ್ ನಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿತ್ತು. ಈ ಅರ್ಜಿಯ ವಿಚಾರಣೆ ಇಂದೂ ನಡೆಯಬೇಕಿದ್ದು, ಕಾರಣಾಂತರಗಳಿಂದ ನಾಡಿದ್ದು ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಹೀಗಾಗಿ, ದರ್ಶನ್ ಗೆ ಎರಡು ದಿನಗಳ ರಿಲೀಫ್ ಸಿಕ್ಕಂತಾಗಿದೆ.
ದರ್ಶನ್ ಪರ ಕಪಿಲ್ ಸಿಬಲ್ ಇಂದು ವಾದ ಮಂಡಿಸಬೇಕಿತ್ತು. ಆದರೆ, ಅವರು ಬೇರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಜರಾಗಬೇಕಿರುವುದರಿಂದ ಒಂದು ದಿನದ ಕಾಲಾವಕಾಶ ಕೇಳಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ಕೊಟ್ಟಿದ್ದು, ವಿಚಾರಣೆ ಗುರುವಾರಕ್ಕೆ (ಜುಲೈ 24) ಮುಂದೂಡಲ್ಪಟ್ಟಿದೆ ಎಂದು ದರ್ಶನ್ ಪರ ಹಿರಿಯ ವಕೀಲ ಸಿದ್ದಾರ್ಥ್ ದವೆ ಹೇಳಿದ್ದಾರೆ.
ಕಳೆದ ವಾರ ನಡೆದ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಜಾಮೀನು ಅರ್ಜಿಯನ್ನು ಏಕೆ ರದ್ದು ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಅಲ್ಲದೆ, ದರ್ಶನ್ಗೆ ಜಾಮೀನು ನೀಡುವಾಗ ವಿವೇಚನೆ ಬಳಸಿಲ್ಲ ಎಂದೂ ಅಭಿಪ್ರಾಯಪಟ್ಟಿತ್ತು. ಒಂದು ವೇಳೆ ಜಾಮೀನು ರದ್ದಾದರೆ ದರ್ಶನ್ ಅವರಿಗೆ ಸಂಕಷ್ಟ ಆರಂಭವಾಗಲಿದೆ. ಅವರ ಕೈಯಲ್ಲಿರುವ ‘ಡೆವಿಲ್’ ಸೇರಿದಂತೆ ಅನೇಕ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಲ್ಲಲಿವೆ. ಈಗಲೂ ಅವರು ಚಿತ್ರೀಕರಣಕಾಗಿ ಬ್ಯಾಂಕಾಕ್ ಗೆ ಹಾರಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲಾ 17 ಆರೋಪಿಗಳಿಗೆ ಜಾಮೀನು ದೊರೆತಿದೆ. ಈ ಪೈಕಿ ಎ1 ಪವಿತ್ರಾ ಗೌಡ, ಎ2 ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡುವಂತೆ ಕರ್ನಾಟಕ ಸರ್ಕಾರ ಕೋರಿದೆ. ಈ ಪ್ರಕರಣದಲ್ಲಿ ದರ್ಶನ್ ಅವರ ಜಾಮೀನು ರದ್ದಾಗಲಿದೆಯೇ ಎಂದು ಕಾದು ನೋಡಬೇಕಿದೆ.