ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಹಾಗೂ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿ.ಪಂ ಸಭಾಂಗಣದಲ್ಲಿ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿಗಳಾದ ಸಿದ್ದಲಿಂಗ ರೆಡ್ಡಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರನ್ನು/ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಕಾರ್ಮಿಕ ಕಾಯ್ದೆ, ಇ.ಎಸ್.ಐ, ಹಾಗೂ ಭವಿಷ್ಯ ನಿಧಿಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಹಾಸನ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಸೋಮಣ್ಣ ಮಾತನಾಡಿ, ಹೊರಗುತ್ತಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಯಾವೆಲ್ಲಾ ಕಾಯ್ದೆಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿ ಕೊಟ್ಟರು.
ಭವಿಷ್ಯ ನಿಧಿ ಇಲಾಖೆಯ ಪ್ರವರ್ಧನಾ ಅಧಿಕಾರಿ ಅಸ್ರ್ಲಾನ್ ಮೊಹಮ್ಮದ್ ಕಿತ್ತೂರ್ ಮಾತನಾಡಿ, ಹೊರಗುತ್ತಿಗೆಯಿಂದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಸಮಯದಲ್ಲಿ ಭವಿಷ್ಯ ನಿಧಿಯನ್ನು ಯಾವ ರೀತಿಯಲ್ಲಿ ನೋಂದಣಿ ಮಾಡಬೇಕೆಂದು ಹಾಗೂ ಭವಿಷ್ಯ ನಿಧಿಯ ಕಾಯ್ದೆ ಬಗ್ಗೆ ತಿಳಿಸಿಕೊಟ್ಟರು.
ಇ.ಎಸ್.ಐ ಇಲಾಖೆಯ ವ್ಯವಸಾಪಕರಾದ ಮಂಜುಳಾ ರವರು, ಇ.ಎಸ್.ಐ ಯಾವ ರೀತಿಯಲ್ಲಿ ಸಿಬ್ಬಂದಿಗಳಿಗೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಸುಮ ಹೆಚ್.ಎಸ್, ಕಾರ್ಮಿಕ ನಿರೀಕ್ಷಕರುಗಳು, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.