ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಹಿಂದೂ ದೇವಾಲಯದ ಬಳಿ “ಇಸ್ಲಾಂ ಧರ್ಮ ಬೋಧಿಸಿದ” ಮತ್ತು ಧಾರ್ಮಿಕ ಕರಪತ್ರಗಳನ್ನು ವಿತರಿಸುವ ಮತಾಂತರಕ್ಕೆ ಪ್ರಚೋದಿಸಿದ ಆರೋಪ ಹೊತ್ತಿದ್ದ ಮೂವರು ಮುಸ್ಲಿಮರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಉದ್ಯೋಗದ ಭರವಸೆ ನೀಡುವ ಮೂಲಕ ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಮತಾಂತರಕ್ಕೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಜಮಖಂಡಿ ನಿವಾಸಿಗಳಾದ ಮುಸ್ತಾಫ ಬಿನ್ ಮುರ್ತುಜ್ ಸಾಬ್, ಅಲಿಸಾಬ್ ಬಿನ್ ಶಬ್ಬೀರ್ ಅಳಗುಂಡಿ ಮತ್ತು ಸುಲೇಮಾನ್ ಬಿನ್ ರಿಯಾಜ್ ಅಹಮದ್ ಗಲಗಲಿ ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬಲವಂತ, ವಂಚನೆ ಅಥವಾ ಪ್ರಚೋದನೆಗೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಪುರಾವೆಗಳಿಲ್ಲ ಎಂದು ಹೇಳಿ, ಈ ಮೂವರ ವಿರುದ್ಧದ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಿಕ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಬಲವಂತ ಅಥವಾ ಆಮಿಷಗಳಿಲ್ಲದೆ ಶಾಂತಿಯುತ ಧರ್ಮೋಪದೇಶಕ್ಕೆ ಸಂವಿಧಾನದ ೨೫ನೇ ವಿಧಿಯ ಅಡಿಯಲ್ಲಿ ಅವಕಾಶ ನೀಡಲಾಗಿದೆ. ಇದು ಒಬ್ಬರ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಖಾತರಿಪಡಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.