ಮೈಸೂರು: ಸಿದ್ದರಾಮಯ್ಯರ ಅಭಿವೃದ್ಧಿ ಕಾರ್ಯವನ್ನು ಡಾ. ಯತೀಂದ್ರ ಸಿದ್ದರಾಮಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಗೆ ಹೋಲಿಸಿದ ವಿಚಾರಕ್ಕೆ ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಕಿಡಿಕಾರಿದ್ದಾರೆ.
ಮೈಸೂರಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವ್ರು, ಯಾರು ಯಾರನ್ನು ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ.ನಾನು ಅವರಿಗಿಂತ ಜಾಸ್ತಿ, ಇವರಿಗಿಂತ ಕಡಿಮೆ ಎಂದುಕೊಳ್ಳಬಾರದು. ಮಹಾರಾಜರು ಅವರ ಕೆಲಸ ಅವರು ಮಾಡಿದ್ದಾರೆ. ಇವರು ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಬೇಕು.ಮಹಾರಾಜರು ಮಾಡಿದ ಕೆಲಸ ಜನರ ಮುಂದೆ ಇದೆ. ನಾನು ಅದೇ ವಂಶಸ್ಥನಾಗಿ ನಾನು ಈ ಬಗ್ಗೆ ಮಾತನಾಡಿದರೆ ಸರಿ ಅನ್ನಿಸುವುದಿಲ್ಲ. ಮಹಾರಾಜರು ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ವಿಷಯಗಳನ್ನು ಡೈವರ್ಟ್ ಮಾಡಲು ಯಾವೊದೋ ವಿಚಾರವನ್ನು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಕಳೆದ 15 ವರ್ಷಗಳಿಂದ ಏನು ಕೊಟ್ಟಿದ್ದೀರಾ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಮೊದಲು ಜನರ ಸಮಸ್ಯೆ ಪರಿಹರಿಸಿ.ಟ್ಯಾಕ್ಸ್ ಹೆಸರಿನಲ್ಲಿ ಬಡ ವ್ಯಾಪಾರಸ್ಥರಿಗೆ ಹಿಂಸೆ ಕೊಡಲಾಗುತ್ತಿದೆ. ಮೊದಲು ಇದನ್ನು ನಿಲ್ಲಿಸಿ.ನೀವು ನೀವೇ ಹೊಲಿಕೆ ಮಾಡಿಕೊಳ್ಳುವುದು ಬೇಡ ಎಂದು ಮೈಸೂರಿನಲ್ಲಿ ಸಂಸದ ಯದುವೀರ್ ಒಡೆಯರ್ ಟಾಂಗ್ ನೀಡಿದರು.
ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಯೋಗ್ಯತೆಯೇ ಇಲ್ಲ.ಈ ಹಿಂದೆ ಮಾಡಿಸಿದ ಕಾಂತರಾಜ್ ವರದಿಯನ್ನು ಕಸದ ಬುಟ್ಟಿಗೆ ಎಸೆದಿದ್ದು ಇದೇ ಕಾಂಗ್ರೆಸ್ ಸರ್ಕಾರ. ಈಗ ಅದು ಕಳೆದು ಹೋಗಿದೆ, ಪತ್ತೆ ಇಲ್ಲ ಎಂದು ಹೇಳುತ್ತಿದ್ದಾರೆ.ಕೇಂದ್ರ ಸರ್ಕಾರ ಈಗ ನಿಯಮ ಬದ್ದವಾಗಿ ಜಾತಿ ಗಣತಿ ಎಲ್ಲವನ್ನೂ ಮಾಡುತ್ತಿದೆ.
ಕೇಂದ್ರದಲ್ಲಿ ಅಷ್ಟು ವರ್ಷ ಅಧಿಕಾರದಲ್ಲಿತ್ತು. ಜಾತಿ ಗಣತಿ ಏಕೆ ಮಾಡಲಿಲ್ಲ.ಸುಮ್ಮನೆ ಜಾತಿ ಗಣತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತೀರಾ. ಕೇಂದ್ರವೇ ಜಾತಿ ಗಣತಿ ಮಾಡುವಾಗ ರಾಜ್ಯ ಸರ್ಕಾರ ಜಾತಿ ಗಣತಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಅಭಿವೃದ್ಧಿ ಬಗ್ಗೆ ಚರ್ಚೆಗೆ ಬನ್ನಿ ಎಂದು ಸಿದ್ದರಾಮಯ್ಯ ಪಂಥಾಹ್ವಾನ ವಿಚಾರಕ್ಕೆ ಮಾತಾಡಿದ ಯದುವೀರ್, ಏನು ಅಭಿವೃದ್ಧಿ ಮಾಡಿದ್ದೇವೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ.ಶ್ವೇತ ಪತ್ರ ಬಂದ ಮೇಲೆ ಉಳಿದಿದ್ದು ಮಾತನಾಡುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ಸವಾಲ್ ಹಾಕಿದರು.
ಸಿಎಂ ಪುತ್ರ ಯತೀಂದ್ರ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಕಾರ್ಯದಷ್ಟೇ ಸಿಎಂ ಸಿದ್ದರಾಮಯ್ಯ ಕೂಡ ಮೈಸೂರಿಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಯತೀಂದ್ರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಇವತ್ತು ಯದುವೀರ್ ಒಡೆಯರ್ ಕೌಂಟರ್ ನೀಡಿದ್ದಾರೆ. ಯದುವೀರ್ ಒಡೆಯರ್ ಈ ಹೇಳಿಕೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.