ಹೈದರಾಬಾದ್ : ಇಂದು ಆಂಧ್ರಪ್ರದೇಶದ ಹೈದರಾಬಾದ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗೃಹ ಇಲಾಖೆಯ ಇಬ್ಬರು ಡಿಎಸ್‌ಪಿಮೃತಪಟ್ಟಿದ್ದು , ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಶಾಂತಾರಾವ್ ಮತ್ತು ಚಕ್ರಧರ ರಾವ್ ಮೃತ ಅಧಿಕಾರಿಗಳು.
ಇವರೆಲ್ಲರೂ ಅಧಿಕೃತ ಕೆಲಸದ ನಿಮಿತ್ತ ವಿಜಯವಾಡದಿಂದ ಹೈದರಾಬಾದ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಹೈದರಾಬಾದ್ ಬಳಿಯ ಚೌಟುಪ್ಪಲ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಮುಂದೆ ಹೋಗುತ್ತಿದ್ದ ಮತ್ತೊಂದು ವಾಹನದ ಚಾಲಕ ಹಠಾತ್ತಾಗಿ ಬ್ರೇಕ್ ಹಾಕಿದಾಗ ಇವರಿದ್ದ ಕಾರು ಚಾಲಕನೂ ಬ್ರೇಕ್ ಹಾಕಿದ್ದಾನೆ. ಆಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ರಸ್ತೆಯ ಇನ್ನೊಂದು ಬದಿಗೆ ಹಾರಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಅಧಿಕಾರಿಗಳಿಬ್ಬರೂ ಆಂಧ್ರಪ್ರದೇಶದ ಗುಪ್ತಚರ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಾಹನ ಚಾಲಕ ಗಾಯಗೊಂಡಿದ್ದು, ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಳಿದು ಬಂದಿದೆ.