Sunday, July 27, 2025
Google search engine

Homeಸ್ಥಳೀಯನಿವೃತ್ತ ನೌಕಾಪಡೆ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ : ನೌಕಾಪಡೆ ಸೇನಾಧಿಕಾರಿ ಸುರೇಂದ್ರ ಸಿಂಗ್‌ಗೆ ಸನ್ಮಾನ

ನಿವೃತ್ತ ನೌಕಾಪಡೆ ಸೈನಿಕರಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ : ನೌಕಾಪಡೆ ಸೇನಾಧಿಕಾರಿ ಸುರೇಂದ್ರ ಸಿಂಗ್‌ಗೆ ಸನ್ಮಾನ

ಮೈಸೂರು : ೨೬ನೇ ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಮೈಸೂರಿನ ನೌಕಾಪಡೆಯ ನಿವೃತ್ತ ಸೇನಾ ಅಧಿಕಾರಿಗಳ ಸಂಘದ ವತಿಯಿಂದ ಭಾರತೀಯ ನೌಕಾಪಡೆಯ ಕಮ್ಯೂನಿಕೇಷನ್ ಅಧಿಕಾರಿ ಹಾಗೂ ಮೈಸೂರು ಎನ್‌ಸಿಸಿ-೩ ಮುಖ್ಯ ತರಬೇತುದಾರರಾದ ಸುರೇಂದ್ರ ಸಿಂಗ್ ಅವರನ್ನು ಗೌರವಿಸಲಾಯಿತು.

ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ನೌಕಾಪಡೆಯ ನಿವೃತ್ತ ಸೇನಾ ಅಧಿಕಾರಿಗಳ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಗಜಾನನ ಟಿ.ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅರ್ಥಪೂರ್ಣ ಸಮಾರಂಭದಲ್ಲಿ ಸುರೇಂದ್ರ ಸಿಂಗ್ ಅವರನ್ನು ನೌಕಾಪಡೆಯ ನಿವೃತ್ತ ಸೇನಾ ಅಧಿಕಾರಿಗಳು ಆತ್ಮೀಯವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಜಾನನ ಟಿ.ಭಟ್ ಅವರು ಮಾತನಾಡಿ, ಭಾರತೀಯ ನೌಕಾಪಡೆಯ ಕಮ್ಯೂನಿಕೇಷನ್ ಅಧಿಕಾರಿ ಹಾಗೂ ಮೈಸೂರು ಎನ್‌ಸಿಸಿ-೩ ಮುಖ್ಯ ತರಬೇತುದಾರರಾದ ಸುರೇಂದ್ರ ಸಿಂಗ್ ಅವರು ಭಾರತೀಯ ನೌಕಾಪಡೆಯ ಸಂಶೋಧನಾ ಹಡಗು ಐಎನ್‌ಎಸ್ ನಿಪತ್ ಹಾಗೂ ಭಾರತೀಯ ನೌಕಾಪಡೆಯ ಅತಿದೊಡ್ಡ ಯುದ್ಧ ಹಡಗು ಐಎನ್‌ಎಸ್ ಶಿವಾಲಿಕ್‌ನಲ್ಲಿ ೧೫ ವರ್ಷಗಳ ಕಾಲ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಕಳೆದ ೨೬ ತಿಂಗಳಿನಿಂದ ಮೈಸೂರಿನಲ್ಲಿ ಎನ್‌ಸಿಸಿ-೩ ನೇವಿ ಬೆಟಾಲಿಯನ್‌ನಲ್ಲಿ ಮುಖ್ಯ ತರಬೇತುದಾರರಾಗಿ ೨ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

ಇವರು ತರಬೇತಿ ನೀಡಿದ ಸುಮಾರು ೧೭ ವಿದ್ಯಾರ್ಥಿಗಳು ಭಾರತೀಯ ನೌಕಾಪಡೆಗೆ ಆಯ್ಕೆಯಾಗಿರುವುದು ಇವರ ಹೆಗ್ಗಳಿಕೆ. ಸುರೇಂದ್ರ ಸಿಂಗ್ ಅವರು ಕರ್ನಾಟಕದಲ್ಲಿ ಮೈಸೂರು ಎನ್‌ಸಿಸಿ ಕೇಂದ್ರ ಉತ್ತಮ ತರಬೇತಿ ಕೇಂದ್ರ ಎಂದು ಹೆಸರು ಪಡೆಯಲು ಅಪಾರ ಕೊಡುಗೆ ನೀಡಿದ್ದಾರೆ. ೨೬ನೇ ಕಾರ್ಗಿಲ್ ವಿಜಯೋತ್ಸವದಂದು ಸುರೇಂದ್ರ ಸಿಂಗ್ ಅವರನ್ನು ಗೌರವಿಸುತ್ತಿರುವುದು ನಮ್ಮ ಸಂಘಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ನೌಕಾಪಡೆ ನಿವೃತ್ತ ಅಧಿಕಾರಿ ಸಬ್‌ಮೆರಿನರ್ ಚಂದ್ರಕುಮಾರ್ ಮಾತನಾಡಿ, ಸುರೇಂದ್ರ ಸಿಂಗ್ ಅವರು ೧೭ ದೇಶಗಳ ನೌಕಾಪಡೆ ತರಬೇತಿ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಒಬ್ಬ ಅತ್ಯುತ್ತಮ ಅಧಿಕಾರಿಯಾಗಿದ್ದಾರೆ. ಮೂಲತಃ ಉತ್ತರ ಖಾಂಡದ ಬದರಿನಾಥ್ ಮೂಲದವರಾದ ಇವರು, ಭಾರತೀಯ ನೌಕಾಪಡೆ ಸೈನ್ಯಕ್ಕೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಸಬ್‌ಮೆರಿನರ್ ಮತ್ತು ವೇದಿಕೆ ಸಂಚಾಲಕರಾದ ಸೈಯದ್ ತಾಜುದ್ದೀನ್ ಹೈದರಿ, ಉಪಾಧ್ಯಕ್ಷರಾದ ಉತ್ತಪ್ಪ, ವೀರ ನಾರಿಯರ ಘಟಕದ ಅಧ್ಯಕ್ಷರಾದ ರಜನಿ, ಮೈಥಿಲಿ ಬಾಲಾಜಿ, ಪ್ರದೀಪ್ ರಾಜ್, ವಿಶೃತ್, ರಘುನಾಥನ್ ಇದ್ದರು.


ನಮ್ಮ ದೇಶದ ಗಡಿಯಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ನಮ್ಮ ವೀರ ಯೋಧರು ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು. ಕಾರ್ಗಿಲ್ ವಿಜಯ ನಮ್ಮ ದೇಶದ ಘನತೆಯನ್ನು ಎತ್ತರಕ್ಕೇರಿಸಿದ ವಿಜಯವಾಗಿದೆ.
ಗಜಾನನ ಟಿ.ಭಟ್, ನಿವೃತ್ತ ನೌಕಾಪಡೆ ಅಧಿಕಾರಿ

RELATED ARTICLES
- Advertisment -
Google search engine

Most Popular