ಮಂಗಳೂರು(ದಕ್ಷಿಣ ಕನ್ನಡ): ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನ ಮಂಗಳೂರು ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಿರ್ಮಿಸಲಾಗಿದ್ದ ರಾಣಿ ಅಬ್ಬಕ್ಕ ನಗರ, ನಾಡೋಜ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಮ್ಮೇಳನದ ಆರಂಭದಲ್ಲಿ ಜನವಾದಿಯ ಜಿಲ್ಲಾಧ್ಯಕ್ಷೆ ಜಯಂತಿ ಬಿ ಶೆಟ್ಟಿ ಧ್ವಜಾರೋಹಣ ಗೈದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷೆ, ರಂಗ ಕಲಾವಿದೆ ಗೀತಾ ಸುರತ್ಕಲ್ ಸ್ವಾಗತ ಭಾಷಣ ಮಾಡಿದರು.

ಸಮ್ಮೇಳನದ ಉದ್ಘಾಟನೆಯನ್ನು ಖ್ಯಾತ ಬರಹಗಾರ್ತಿ, ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ನಗಾರಿ ಭಾರಿಸುವ ಮೂಲಕ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ಕವಿಯತ್ರಿ ಚಂದ್ರಕಲಾ ನಂದಾವರ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ಫ್ಲೇವಿ ಕ್ರಾಸ್ತಾ ಅಧ್ಯಕ್ಷೀಯ ಭಾಷಣ ಮಾಡಿದರು. ಜನವಾದಿಯ ರಾಜ್ಯ ಉಪಾಧ್ಯಕ್ಷರಾದ ಕೆ ಎಸ್ ಲಕ್ಷ್ಮಿ, ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ, ಮುಖಂಡರಾದ ಪ್ರಮೀಳಾ ಶಕ್ತಿನಗರ, ಶಮೀಮಾ ಭಾನು ತಣ್ಣೀರುಬಾವಿ, ಈಶ್ವರಿ ಪದ್ಮುಂಜ, ಲತಾ ಲಕ್ಷ್ಮಣ್, ಅಸುಂತಾ ಡಿ ಸೋಜ, ಮಾಧುರಿ ಬೋಳಾರ ಉಪಸ್ಥಿತರಿದ್ದರು.
ನಿರ್ಣಯಗಳ ಅಂಗೀಕಾರ
ಧರ್ಮಸ್ಥಳ ಅಸಹಜ ಸಾವುಗಳ ನ್ಯಾಯಯುತ ತನಿಖೆ ನಡೆಯಬೇಕು, ಪದ್ಮಲತಾ, ಸೌಜನ್ಯ, ವೇದವಲ್ಲಿ, ಯಮುನಾ ಕೊಲೆ ಪ್ರಕರಣಗಳನ್ನು ಎಸ್ ಐ ಟಿ ತನಿಖೆಯ ವ್ಯಾಪ್ತಿಯ ಒಳಗಡೆಗೆ ತರಬೇಕು ಎಂದು ಆಗ್ರಹಿಸಿ ನಿರ್ಣಯ
ಶಕ್ತಿಯೋಜನೆಯ ಲಾಭ ಜಿಲ್ಲೆಯ ಮಹಿಳೆಯರಿಗೆ ದೊರಕುವಂತಾಗಲು ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಸರಕಾರಿ ಬಸ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒದಗಿಸಲು ಆಗ್ರಹಿಸಿ ನಿರ್ಣಯ
ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಆಗ್ರಹಿಸಿ ನಿರ್ಣಯಗಳನ್ನು ಆಂಗೀಕರಿಸಲಾಯಿತು.
ಮಧ್ಯಾಹ್ನದ ತರುವಾಯ ಸಮ್ಮೇಳನದ ಪ್ರಕ್ರಿಯೆಗಳು ನಡೆದವು. ನೂತನ ಜಿಲ್ಲಾ ಸಮಿತಿಯನ್ನು ಸರ್ವಾನುಮತದಿಂದ ಚುನಾಯಿಸಲಾಯಿತು.