ಮೈಸೂರು: ನಗರ ಹಾಗೂ ತಾಲ್ಲೂಕು ಮಟ್ಟದಲ್ಲಿ ಒಕ್ಕಲಿಗ ಸಮುದಾಯವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಒಂದೇ ವೇದಿಕೆಯ ಸಮಿತಿಯಡಿಯಲ್ಲಿ ಕೆಲಸ ನಿರ್ವಹಿಸುವ ಒಮ್ಮತದ ತೀರ್ಮಾನವನ್ನು ಕೈಗೊಳ್ಳಲಾಯಿತು.
ಜಯನಗರದ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ನಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷತೆಯಲ್ಲಿ ಮೈಸೂರು ಜಿಲ್ಲಾ ಮತ್ತು ನಗರದ ಒಕ್ಕಲಿಗ ಸಂಘಟನೆಗಳ ಸಾಮರಸ್ಯ ವೇದಿಕೆಯಿಂದ ಚರ್ಚೆ ಹಾಗೂ ಸಾಮರಸ್ಯ ಸಭೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾತಿಗಣತಿ ನಡೆಯುತ್ತಿರುವ ಕುರಿತು ಸಮುದಾಯಕ್ಕೆ ಅರಿವು ಮೂಡಿಸುವುದು. ಸಮುದಾಯಕ್ಕೆ ಅನ್ಯಾಯವಾದಾಗ ಅಲ್ಲಿ ಸಮುದಾಯದವರೆಲ್ಲರೂ ಸಂಘಟನಾತ್ಮಕವಾಗಿ ಹೋರಾಟ ನಡೆಸುವ ಕುರಿತು ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ಜಿಪಂ ಮಾಜಿ ಅಧ್ಯಕ್ಷ ಮಾದೇಗೌಡ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ನೇಗಿಲಯೋಗಿ ಟ್ರಸ್ಟ್‌ನ ರವಿಕುಮಾರ್, ನಮ್ಮೂರು ನಮ್ಮೋರು ಟ್ರಸ್ಟ್ ಅಧ್ಯಕ್ಷ ಸತೀಶ್ ಗೌಡ, ನಗರಪಾಲಿಕೆ ಮಾಜಿ ಸದಸ್ಯೆ ಪ್ರೇಮಾಶಂಕರೇಗೌಡ, ಜಿಪಂ ಮಾಜಿ ಸದಸ್ಯ ಅರುಣ್ ಕುಮಾರ್, ಪೂರ್ವ ಒಕ್ಕಲಿಗರ ಸಂಘ, ವಿವಿಧ ಒಕ್ಕಲಿಗ ಮಹಿಳಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಜನಗಣತಿಯ ಬಗ್ಗೆ ಇತರೆ ಸಮುದಾಯಗಳ ಮಠಾಧೀಶರು ಹಾಗೂ ರಾಜಕಾರಣಿಗಳು ಪ್ರಚಾರದೊಂದಿಗೆ ಸಮುದಾಯವನ್ನು ಜಾಗೃತಗೊಳಿಸುತ್ತಿರುವ ಮಾದರಿಯಲ್ಲಿ ನಮ್ಮ ಸಮುದಾಯದ ಮಠಾಧೀಶರು, ರಾಜಕಾರಣಿಗಳು ಮಾತನಾಡದಿರುವುದು ಬೇಸರದ ಸಂಗತಿಯಾಗಿದೆ. ಈ ಕೂಡಲೇ ಸಮುದಾಯದ ಸ್ವಾಮೀಜಿಗಳು ಹಾಗೂ ನಾಯಕರು ಜನಗಣತಿ ಕುರಿತಂತೆ ಮಾತನಾಡಬೇಕೆಂದು ಆಗ್ರಹಿಸಿದರು.
ಜತೆಗೆ ಸಮುದಾಯದ ಸಂಘಟನೆ ಬಲಗೊಳಿಸಲು ಸದರಿ ಸಾಮರಸ್ಯ ವೇದಿಕೆಯಡಿಯಲ್ಲಿ ಪ್ರತಿ ಸಂಘದಿಂದ ಇಬ್ಬರೂ ಪ್ರತಿನಿಧಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ಸರ್ಕಾರದ ಸೌಲಭ್ಯಗಳನ್ನು ಸಮುದಾಯಕ್ಕೆ ತಲುಪಿಸಲು ಹಾಗೂ ಸಮುದಾಯಕ್ಕೆ ಎನಾದರೂ ಅನ್ಯಾಯವಾದ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ನ್ಯಾಯಯುತ ಹೋರಾಟ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ತಾಲ್ಲೂಕು ಒಕ್ಕಲಿಗ ಸಂಘದ ಕಟ್ಟಡದ ಅಭಿವೃದ್ಧಿ ಬಗ್ಗೆ ರೂಪುರೇಷೆ ರೂಪಿಸಲು ಚರ್ಚಿಸಲಾಯಿತು.
ಇಂದು ಕಮೀಷನರ್ ಭೇಟಿ
ಆಲನಹಳ್ಳಿಯಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಸ್ಥಳೀಯರಾದ ಜಿಪಂ ಮಾಜಿ ಸದಸ್ಯ ಮಾದೇಗೌಡರ ನೇತೃತ್ವದ ತಂಡದ ವಿರುದ್ಧ ಪೊಲೀಸರು ಸುಳ್ಳು ದೂರು ದಾಖಲಿಸಲು ನೋಟೀಸ್ ನೀಡಿರುವ ನಿರ್ಣಯವನ್ನು ಸಭೆಯಲ್ಲಿ ಖಂಡಿಸಲಾಯಿತು. ಇದೇ ವಿಚಾರವಾಗಿ ನಗರ ಪೊಲೀಸರನ್ನು ಭೇಟಿ ಸಿಸಿಟಿವಿ ವಾಸ್ತವನ್ನು ಆಧರಿಸಿ ಸುಳ್ಳು ಮೊಕ್ಕದ್ದಮೆ ದಾಖಲಿಸಲು ಹೊರಟಿರುವ ಪೊಲೀಸರ ನಡೆಯನ್ನು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂದು ಪ್ರಮುಖ ನಾಯಕರು ಭೇಟಿ ಮಾಡಿ ಚರ್ಚಿಸಲು ತೀರ್ಮಾನಿಸಲಾಯಿತು.