Tuesday, August 5, 2025
Google search engine

Homeಕಾಡು-ಮೇಡುತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 19 ನವಿಲುಗಳ ಅಕಾಲ ಮರಣ: ವಿಷಪ್ರಯೋಗ ಶಂಕೆ, ಅರಣ್ಯ ಇಲಾಖೆ ತನಿಖೆ...

ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 19 ನವಿಲುಗಳ ಅಕಾಲ ಮರಣ: ವಿಷಪ್ರಯೋಗ ಶಂಕೆ, ಅರಣ್ಯ ಇಲಾಖೆ ತನಿಖೆ ಆರಂಭ

ತುಮಕೂರು : ರಾಜ್ಯದಲ್ಲಿ ಇತ್ತೀಚೆಗೆ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದು ಸಾಮಾನ್ಯವಾಗಿದೆ. ಈ ಹಿಂದೆ ಮಲೆ ಮಹದೇವಪ್ಪನ ಬೆಟ್ಟದಲ್ಲಿ ಐದು ಹುಲಿಗಳಿಗೆ ವಿಷವಿಟ್ಟು ಕೊಲ್ಲಲಾಗಿತ್ತು. ಇದೀಗ ತುಮಕೂರಿನ ಮಧುಗಿರಿ ತಾಲೂಕಿನಲ್ಲಿ 19 ನವಿಲುಗಳು ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನಲ್ಲಿ ಸುಮಾರು 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಗಸ್ಟ್ 1 ರಂದು ರಾತ್ರಿ ಸ್ಥಳೀಯರು ನಡೆದುಕೊಂಡು ಹೋಗುತ್ತಿರುವಾಗ ಬೆಳಕಿಗೆ ಬಂದಿದೆ.

ಸತ್ತಿರುವ ನವಿಲುಗಳ ಪೈಕಿ ಐದು ಗಂಡು ಹಾಗೂ 14 ಹೆಣ್ಣು ನವಿಲುಗಳು ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.  ಸದ್ಯ ಸತ್ತ ನವಿಲುಗಳನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ನವಿಲುಗಳ ಸಾವಿಗೆ ಕಾರಣ ಗೊತ್ತಾಗಲಿದೆ.

ಇನ್ನು ಅರಣ್ಯ ಇಲಾಖೆಯ ಎಸಿಎಫ್ ಮಲ್ಲಿಕಾರ್ಜುನ್, ವಲಯ ಅರಣ್ಯ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ವಿಷಾಹಾರ ತಿಂದು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

 ಈ ಹಿಂದೆ ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂನಲ್ಲಿ ದುಷ್ಕರ್ಮಿಗಳು ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳನ್ನು ವಿಷ ಹಾಕಿ  ಕೊಂದಿದ್ದರು. 

ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿಗಳು ಬೇಟೆಯಾಜಿ ಕೊಂದಿದ್ದಕ್ಕೆ ಸಿಟ್ಟಾದ ಮಾಧುರಾಜು ಈ ನಷ್ಟದ ಸೇಡು ತೀರಿಸಿಕೊಳ್ಳಲೆಂದು ಮೃತಪಟ್ಟಿದ್ದ ಹಸುವಿನ ದೇಹದ ಮೇಲೆ ವಿಷವನ್ನು ಸಿಂಪಡಿಸಿದ್ದಾನೆ. ಮಾಧುರಾಜು ಸ್ನೇಹಿತರಾದ ಕುನ್ನಪ್ಪ ಮತ್ತು ನಾಗರಾಜು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದರು.

ಹೀಗೆ ವಿಷ ತಿಂದ ಹುಲಿಗಳು ಸಾವನ್ನಪ್ಪಿದ್ದು, ಈ ಪ್ರಕರಣದ ಸಂಬಂಧ ಆರೋಪಿಗಳಾದ ಮಾಧುರಾಜು, ನಾಗರಾಜು ಹಾಗೂ ಕುನ್ನಪ್ಪ ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳ ಕರ್ತವ್ಯಲೋಪ, ನಿರ್ಲಕ್ಷ್ಯ ಕೂಡ ಎದ್ದುಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಚಕ್ರಪಾಣಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಚಾಮರಾಜನಗರದಲ್ಲಿ ಕಂದೇಗಾಲ – ಕೊಡಸೋಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದರು. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿತ್ತು. ಎರಡು ಕೋತಿಗಳು ಬದುಕಿತ್ತು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular