ನೆಲಮಂಗಲ : ಜಿಮ್ ವೊಂದರಲ್ಲಿ ರಿಸೆಪ್ಷನಿಸ್ಟ್ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯೊಬ್ಬಳು ಮೂರಂತಸ್ತಿನ ಕಟ್ಟಡದಿಂದ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ಮೃತ ಯುವತಿಯನ್ನು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮರಳುಗೊಂಡ್ಲು ಗ್ರಾಮದ ರಕ್ಷಿತಾ (20) ಎಂದು ಗುರುತಿಸಲಾಗಿದೆ. ಕಳೆದ ಎಂಟು ತಿಂಗಳ ಹಿಂದೆ ಕಡಬಗೆರೆ ಜುನಿಫರ್ ಫಿಟ್ನೆಸ್ ಸೆಂಟರ್ ಗೆ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು.
ರಕ್ಷಿತಾ ತನ್ನ ತಂದೆ ಲೋಕೇಶ್, ತಾಯಿ ವಾಸಂತಮ್ಮ, ಸಹೋದರನ ಜೊತೆ ಮಾಚೋಹಳ್ಳಿಯಲ್ಲಿ ವಾಸವಾಗಿದ್ದರು. ಆದರೆ ನಿನ್ನೆ ಕೆಲಸಕ್ಕೆಂದು ಮನೆಯಿಂದ ಖುಷಿ ಖುಷಿಯಾಗಿ ಹೊರಟಿದ್ದ ರಕ್ಷಿತಾ ಮೂರಂತಸ್ತಿನ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದು, ಮೃತಳ ಕುಟುಂಬಸ್ಥರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ರಕ್ಷಿತಾ ಯಾರೊಂದಿಗೂ ಗಲಾಟೆ ಮಾಡಿಕೊಂಡವಳಲ್ಲ, ಆಕೆ ಆಯ್ತು ಆಕೆಯ ಕೆಲಸ ಆಯ್ತು ಎಂದು ಇದ್ದಳು, ಹೀಗಿರುವಾಗ ದಿಢೀರ್ ಆಗಿ ಆತ್ಮಹತ್ಯೆ ಮಾಡಿಕೊಳ್ಳಲು ಏನಾಗಿತ್ತು. ಆಕೆ ದಿನನಿತ್ಯ ಏನೇ ಆದರೂ ತಮಗೆ ಹೇಳುತ್ತಿದ್ದಳು ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರೆ ಹೇಗೆ ಸಾದ್ಯ..
ಆಕೆ ಮೂರಂತಸ್ತಿನ ಕಟ್ಟಡದಿಂದ ಬಿದ್ದರೂ ಕೂಡ ಆಕೆಯ ದೇಹದ ಮೇಲೆ ಒಂದೇ ಒಂದು ಸಣ್ಣ ಗಾಯ ಕೂಡ ಇರಲಿಲ್ಲ. ಅಷ್ಟು ಮೇಲಿಂದ ಬಿದ್ದರು ಒಂದು ಸಣ್ಣ ಗಾಯ ಆದರೂ ಅಗಬೇಕಿತ್ತಲ್ಲ, ಎಂದು ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.