ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಈ ವೇಳೆ ಗುಜರಾತ್ ವಿಮಾನ ದುರಂತ, ಆರ್ ಸಿಬಿ ವಿಜಯೋತ್ಸವ ಕಾಲ್ತುಳಿತ, ಹಾಗೂ ಪಹಲ್ಗಾಮ್ ದಾಳಿಯ ವೇಳೆ ಮೃತಪಟ್ಟಿದ್ದ ಎಲ್ಲರಿಗೂ ಕೂಡ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈಗಾಗಲೇ ವಿಧಾನ ಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಅದಕ್ಕೂ ಮೊದಲಿಗೆ ಗುಜರಾತ್ ಏರ್ ಇಂಡಿಯಾದಲ್ಲಿ ದುರಂತ ಆರ್ ಸಿಬಿ ವಿಜಯೋತ್ಸವದ ವೇಳೆ ಮೃತಪಟ್ಟ, ಹಾಗೂ ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಕರ್ನಾಟಕದ ಮಂಜುನಾಥ್ ರಾವ್ ಮತ್ತು ಭರತ್ ಭೂಷಣ್ ಸೇರಿದಂತೆ ಒಟ್ಟು 28 ಜನ ಮೃತಪಟ್ಟಿರುವುದು ದುಃಖದ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಇನ್ನು ಸದನದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದ ದುರಂತ ಘಟನೆಯ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಪಟ್ಟು ಹಿಡಿದಿವೆ. ಸದನದಲ್ಲಿ ಆರ್‌ಸಿಬಿ ಕಾಲ್ತುಳಿತ ಪ್ರಕರಣದ ಚರ್ಚೆಗೆ ಸಮಯ ನೀಡುವಂತೆ ಬಿಜೆಪಿ ನಿಲುವಳಿ ನೀಡಿದೆ.
ಇಂದಿನ ಅಧಿವೇಶನದಲ್ಲಿ ನಿಲುವಳೀ ಸೂಚನೆ ಕೊಟ್ಟಿದ್ದೇವೆ., ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತದ ಬಗ್ಗೆ ಚರ್ಚೆಯಾಗಲೇ ಬೇಕು. ಘಟನೆಯಲ್ಲಿ ಮೃತಪಟ್ಟ 11 ಜನರಿಗೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇವೆ ಎಂದು ವಿರೋಧಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಐಪಿಎಲ್ 2025 ರ ಪಂದ್ಯಾವಳಿಯಲ್ಲಿ ಬೆಂಗಳೂರಿನ ಮೂಲದ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಗಳಿಸಿತ್ತು. ಈ ಪಂದ್ಯದ ಆಟಗಾರರನ್ನು ಪಂದ್ಯದ ಮಾರನೆಯ ದಿನ ಬೆಂಗಳೂರಿನಲ್ಲಿ ಕರೆದು ಸನ್ಮಾನ ಹಾಗೂ ರೋಡ್ ಶೋ ನಡೆಸಲು ಸರ್ಕಾರ ನಿರ್ಧಿರಿಸಿತ್ತು.
ಇದರಂತೆ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಪೂರ್ವನಿಯೋಜಿತ ಕಾರ್ಯಕ್ರಮ ನಡೆಯುವ ವೇಳೆ ಕಾಲ್ತುಳಿತ ದುರಂತ ಸಂಭವಿಸಿತ್ತು. ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ನೋಡಲು ಬಂದಿದ್ದ 11 ಮಂದಿ ಅಭಿಮಾನಿಗಳು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟಿದ್ದರು.
ಈ ಘಟನೆಯ ಸರ್ಕಾರದ ಇರುಸುಮುರುಸಿಗೆ ಕಾರಣವಾಗಿತ್ತು. ಸ್ವತಃ ಆರ್‌ಸಿಬಿ ತಂಡವೇ ತಮ್ಮನ್ನು ಸರ್ಕಾರವೇ ಆಹ್ವಾನಿಸಿತ್ತು ಎಂದು ಹೇಳಿಕೊಂಡಿದ್ದರು. ಇದರಿಂದ ಮುಜುಗರಕ್ಕೀಡಾಗಿದ್ದ ಸಿದ್ದರಾಮಯ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಸೇರಿದಂತೆ ಹಲವು ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.
ಸರ್ಕಾರದ ತಪ್ಪಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪೊಲೀಸ್ ಇಲಾಖೆಯು ಮೆರವಣಿಗೆ ಮತ್ತು ರೋಡ್ ಶೋ ನಡೆಸಲು ಹಿಂಜರಿದಿತ್ತು ಎಂದು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಆದರೂ ಸಹ ಆರ್‌ಸಿಬಿ ಫ್ರಾಂಚೈಸಿ ಕಾರ್ಯದರ್ಶಿ ಸೇರಿದಂತೆ ಹಲವರನ್ನು ಪ್ರಕರಣದಡಿ ಬಂಧಿಸಲಾಗಿತ್ತು.
ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಆದರೂ ಸಹ ಸರ್ಕಾರದ ತೀವ್ರ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದಿಂದ ಈ ಘಟನೆ ಸಂಭವಿಸಿರುವುದರಿಂದ ಹೆಚ್ಚು ಪರಿಹಾರ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಕಾಂಗ್ರೆಸ್ ಸರ್ಕಾರವು ಇದನ್ನು ತನ್ನ ವೈಫಲ್ಯವೆಂದು ಕೊನೆಗೂ ಒಪ್ಪಿಕೊಳ್ಳದಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.