ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮದಲ್ಲಿ ಮೂರು ದಶಕಗಳಿಗೂ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಪದ್ಮಲತಾ ಅವರ ಸಹೋದರಿ ಈ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ದೂರು ನೀಡಲು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಆಗಮಿಸಿ ದೂರು ನೀಡಿದ್ರು. ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಅವರು ಸಿಪಿಎಂ ಪಕ್ಷದ ಮುಖಂಡ ಬಿ.ಎಂ.ಭಟ್ ಹಾಗೂ ಇತರರೊಂದಿಗೆ ಎಸ್ಐಟಿ ಕಚೇರಿಗೆ ಆಗಮಿಸಿದ್ದರು.
ಎಸ್ಐಟಿ ಠಾಣೆಗೆ ತಂಡದ ಹಿರಿಯ ಅಧಿಕಾರಿಗಳು ಆಗಮಿಸಿದ ಬಳಿಕ ಅವರಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.ಸುಮಾರು 39 ವರ್ಷಗಳ ಹಿಂದೆ ಅಂದರೆ 1986ರಲ್ಲಿ ಬೋಳಿಯಾರು ನಿವಾಸಿ ಪದ್ಮಲತಾ ಅವರನ್ನು ಅತ್ಯಾಚಾರಗೈದು ಕೊಲೆಗೈಯಲಾಗಿತ್ತು.
ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕ ಸಾಕ್ಷಿ ದೂರುದಾರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಎಸ್.ಐ.ಟಿ. ರಚಿಸಲಾಗಿದ್ದು, ತನಿಖೆ ನಡೆಸುತ್ತಿದೆ. ಈ ಮಧ್ಯೆ ಬೆಳ್ತಂಗಡಿಯಲ್ಲಿ ಎಸ್ಐಟಿ ಕಚೇರಿ ತೆರೆಯಲಾಗಿದ್ದು, ಅದಕ್ಕೆ ಠಾಣೆಯ ಸ್ಥಾನಮಾನ ನೀಡಲಾಗಿದೆ.