Wednesday, August 13, 2025
Google search engine

Homeರಾಜ್ಯಸುದ್ದಿಜಾಲರೈತರಿಗೆ ಸೂಕ್ತ ಬೆಲೆ ಕೊಟ್ಟರೆ, ಜನಪ್ರತಿನಿಧಿಗಳಿಗೆ 5 ಸಾವಿರ ನಾವೇ ಕೊಡುತ್ತೇವೆ: ಹೊನ್ನೂರು ಪ್ರಕಾಶ್

ರೈತರಿಗೆ ಸೂಕ್ತ ಬೆಲೆ ಕೊಟ್ಟರೆ, ಜನಪ್ರತಿನಿಧಿಗಳಿಗೆ 5 ಸಾವಿರ ನಾವೇ ಕೊಡುತ್ತೇವೆ: ಹೊನ್ನೂರು ಪ್ರಕಾಶ್

ಯಳಂದೂರು: ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ದರ ನಿಗಧಿಗೊಳಿಸಿ, ಇವರಿಗೆ ವೈಜ್ಞಾನಿಕವಾಗಿ ಕೂಲಿ ನೀಡಿದರೆ ನಾವೆ ಜನಪ್ರತಿನಿಧಿಗಳ ಮನೆಗಳಿಗೆ ಮಾಸಿಕ ೫ ಸಾವಿರ ರೂ. ನೀಡುತ್ತೇವೆ ಎಂದು ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ಹೊನ್ನೂರು ಪ್ರಕಾಶ್ ಕರೆ ನೀಡಿದರು.

ಸರ್ಕಾರ ರೈತರನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದೆ. ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೆ ತಿಂಗಳಿಗೆ ೨ ಸಾವಿರ ರೂ. ಹಣ ಹಾಕುತ್ತಿದ್ದಾರೆ. ಆದರೆ ಈ ಹಣ ನಮ್ಮದೇ ಎಂಬುದರ ಅರಿವು ನಮಗಿರಬೇಕು. ನಾವು ಆರ್ಥಿಕವಾಗಿ ಸಬಲರಾದರೆ ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ತಿಂಗಳಿಗೆ ೫ ಸಾವಿರ ರೂ. ನೀಡುವ ಶಕ್ತಿ ನಮ್ಮಲ್ಲಿದೆ.

ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಮಗೆ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಸರ್ಕಾರಿ ನೌಕರರಿಗೆ ಪ್ರತಿ ಹಲವು ಬಾರಿ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ಜನಪ್ರತಿನಿಧಿಗಳು ತಮಗಿಷ್ಟ ಬಂದಂತೆ ವೇತನ, ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಮೂರು ದಶಕಗಳ ಹಿಂದಿನ ವೇತನಕ್ಕಿಂತ ನೂರಾರು ಪಟ್ಟು ಹೆಚ್ಚು ಮಾಡಲಾಗಿದೆ. ಆದರೆ ರೈತರು ಬೆಳೆಯುವ ಬೆಳೆಗಳಿಗೆ ಶೇ. ೩೦ ರಷ್ಟು ಬೆಲೆ ಏರಿಕೆಯಾಗಿಲ್ಲ. ಈತನ ಕೂಲಿಯಲ್ಲೂ ಈತನಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ರೈತರ ಕಷ್ಟಗಳಿಗೆ ನಾವು ಆಯ್ಕೆ ಮಾಡಿರುವ ಜನನಾಯಕರು ಸ್ಪಂಧಿಸುತ್ತಿಲ್ಲ, ನಾವು ಇವರನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮನ್ನಾಳುತ್ತಿರುವ ಎಲ್ಲಾ ಪಕ್ಷಗಳ ನಾಯಕರೂ ನಮ್ಮನ್ನು ಗುಲಾಮಗಿರಿಗೆ ತಳ್ಳುತ್ತಿದ್ದಾರೆ.

ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ದುಡ್ಡಿನಿಂದಲೇ ಬದುಕು ನಡೆಸುತ್ತಾರೆ. ಈ ಬಗ್ಗೆ ಜಾಗೃತಿಯನ್ನು ಮೂಡಿಸಿಕೊಳ್ಳಬೇಕು. ಗ್ರಾಮ ಸವರಾಜ್ಯ ಮಾಡಬೇಕು. ದೇಶದಲ್ಲಿ ನಾವು ಆರ್ಥಿಕವಾಗಿ ಸಬಲರಾಗುವ ಯೋಜನೆಗಳನ್ನು ರೂಪಿಸಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ ಮುಂದೆ ನಾವು ಕೈ ಕಟ್ಟಿ ನಿಲ್ಲಬಾರದು, ಇವರು ನಮ್ಮ ಸೇವಕರಾಗಿದ್ದು ಅವರಿಂದ ಕೆಲಸ ಮಾಡಿಸಿಕೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ದೇಶದ ಲಕ್ಷಾಂತರ ಮಂದಿ ರೈತರು ಸಂಕಷ್ಟದಲ್ಲಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕು, ರೈತ ಸಂಘದ ಎಲ್ಲಾ ಸದಸ್ಯರೂ ಸತ್ಯ, ನಿಷ್ಠೆ, ಪ್ರಮಾಣಿಕತೆಯಿಂದ ಇರಬೇಕು. ಇದರಲ್ಲಿ ರಾಜಕೀಯ ಬೆರೆಸಬಾರದು ಇದು ಬಂದರೆ ನಮ್ಮ ಸಂಘಟನೆ ದುರ್ಬಲಗೊಳ್ಳುತ್ತದೆ ಹಾಗಾಗಿ ಇದರಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಅಲ್ಲದೆ ಆ.೧೪ ರಂದು ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ಧಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಅಂಬಳೆ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಮಾತನಾಡಿದರು. ಪುಟ್ಟಮಾದೇಗೌಡ. ಪ್ರಸಾದ್, ಮಹದೇವಸ್ವಾಮಿ, ರಾಮಶೆಟ್ಟಿ, ಶಿವಣ್ಣ, ಗ್ರಾ.ಪಂ ಸದಸ್ಯ ಆರ್. ಸೋಮಣ್ಣ, ನಂಜುಂಡಶೆಟ್ಟಿ, ಸಿದ್ದಶೆಟ್ಟಿ, ಗೋವಿಂದಶೆಟ್ಟಿ, ಶಾಂತರಾಜು, ನಾಗರಾಜು, ಅನಂತು, ಸಿದ್ದು, ಜಿ.ಎಂ. ಮಹೇಶ್, ಗಿರೀಶ್, ಕೆ.ಪಿ. ನಾಗರಾಜು, ಎನ್. ರಾಜು, ನಾಗ, ಎಂ. ರಾಜು, ಬಸವರಾಜು, ಶ್ರೇಯಸ್, ನಾಗೇಂದ್ರ, ನಂಜುಂಡಶೆಟ್ಟಿ, ಮದನ್, ಬಂಗಾರ,ಮಹೇಶ್, ಸತೀಶ, ಮಾದೇವ, ಬಿ. ಬಸವರಾಜು, ಸೋಮಣ್ಣ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular