Thursday, August 14, 2025
Google search engine

Homeರಾಜ್ಯಸುದ್ದಿಜಾಲಹರ್ ಘರ್ ತಿರಂಗಾ ಅಭಿಯಾನದಡಿ ಜಿಲ್ಲೆಯ ಮನೆ-ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಎಡಿಸಿ ಕರೆ

ಹರ್ ಘರ್ ತಿರಂಗಾ ಅಭಿಯಾನದಡಿ ಜಿಲ್ಲೆಯ ಮನೆ-ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಎಡಿಸಿ ಕರೆ

ರಾಮನಗರ: 2025ನೇ ಸಾಲಿನ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಿಗೊಳಿಸಲು ಜಿಲ್ಲೆಯ ಪ್ರತಿಯೊಂದು ಮನೆ-ಮನೆಯಲ್ಲಿಯೂ ಆಗಸ್ಟ್ 15 ರವರೆಗೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಕರೆ ನೀಡಿದರು.

ಅವರು ಆ. 12ರ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವತಂತ್ರ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಬೇಕಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಪ್ರತಿ ಮನೆ ಮನೆಯಲ್ಲಿಯೂ, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ನಿಗಮ ಮಂಡಳಿಗಳು, ಸ್ವಸಹಾಯ ಗುಂಪುಗಳು, ಸಾರ್ವಜನಿಕ ಉದ್ಯಮ ಸಂಸ್ಥೆಗಳು, ಸಂಘ ಸಂಸ್ಥೆಗಳು, ನಾಗರಿಕ ಸೇವಾ ಸಂಸ್ಥೆಗಳು, ಶಾಲಾ-ಕಾಲೇಜುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ಸ್ವಯಂ ಪ್ರೇರಿತರಾಗಿ ಆ.15ರ ವರೆಗೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಹಾಗೂ ಈ ಅಭಿಯಾನದಡಿ ತೆಗೆಯಲಾದ ಸೆಲ್ಪಿ ಭಾವಚಿತ್ರ ಹಾಗೂ ವಿಡಿಯೋಗಳನ್ನು harghartiranga.com ಜಾಲತಾಣದಲ್ಲಿ ಅಪ್ಲೋಡ್ ಮಾಡುವಂತೆ ಅಪರ ಜಿಲ್ಲಾಧಿಕಾರಿಯವರು ಮನವಿ ಮಾಡಿದರು.

ಜಿಲ್ಲೆಯ ಶಾಲಾ ಹಾಗೂ ಕಾಲೇಜು ಮಟ್ಟದಲ್ಲಿ ಆಯೋಜಿಸುವ ತಿರಂಗ ಸಂಗೀತೋತ್ಸವದಲ್ಲಿ ದೇಶಭಕ್ತಿ ಕುರಿತಾದ ಹಾಗೂ ಬಾವುಟದ ಘನತೆ ಹೆಚ್ಚಿಸುವ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿರಂಗ ಜನ ಯಾತ್ರೆ ಹಾಗೂ ತಿರಂಗ ಬಟ್ಟೆಗಳನ್ನು ಧರಿಸಿ ಮಾನವ ಸರಪಳಿ ನಿರ್ಮಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ ಅವರು,  ಜಿಲ್ಲಾ ಖಾದಿ ಗ್ರಾಮೋದ್ಯೋಗ ಇಲಾಖೆ ಅಧಿಕಾರಿಗಳು ತಿರಂಗ ಯೋಜನೆ ಅಡಿ ಆಹಾರ, ಹಾರ ಹಾಗೂ ದೀಪ ಇತ್ಯಾದಿ ಕರಕುಶಲ ವಸ್ತುಗಳ ಉತ್ಪನ್ನಗಳ ಮಾರಾಟ ಮತ್ತು ತಿರಂಗ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೈಕ್, ಸೈಕಲ್ ಜನ ಯಾತ್ರೆಗಳನ್ನು ಆಯೋಜಿಸುವಂತೆ ಹಾಗೂ ತಿರಂಗ ಬಟ್ಟೆಗಳನ್ನು ಧರಿಸಿ ಮಾನವ ಸರಪಳಿ ನಿರ್ಮಿಸುವಂತೆ ತಿಳಿಸಿದರು. 

ಜಿಲ್ಲೆಯ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular