ರಾಮನಗರ: 2025-26ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳನ್ನು ಆ. 18ರಂದು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 1 ರಂದು ಆಯೋಜಿಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಅವರಿಗೆ ಸೂಚಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನ ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸಂಘಟಿಸುವ ಕುರಿತು ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಆ. 18ರಂದು ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಕನಕಪುರ ತಾಲ್ಲೂಕು ಕ್ರೀಡಾಂಗಣ, ಮಾಗಡಿ ಟೌನಿನ ಕೋಟೆ ಮೈದಾನ ಹಾಗೂ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಸಭೆಯಲ್ಲಿ ಹಾಜರಿದ್ದ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಂತೆ ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟದ ಸಂಘಟನೆಯು ಸಹ ಯಶಸ್ವಿಯಾಗಿ ಸಂಘಟಿಸುವುದು ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಸಂಘಟಿಸುವ ಸಲುವಾಗಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ವೈದ್ಯಕೀಯ, ಆಂಬ್ಯುಲೆನ್ಸ್ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ, ಕ್ರೀಡಾ ಅಂಕಣಗಳ ಸಿದ್ದತೆ, ಇನ್ನಿತರೆ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಸಲುವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸಹ ಶಾಲಾ ಶಿಕ್ಷಣ ಇಲಾಖೆಯ ಸಹಕಾರವನ್ನು ಪಡೆದುಕೊಂಡು ಅಚ್ಚುಕಟ್ಟಾಗಿ ಯಾವುದೇ ರೀತಿಯ ಅಡಚಣೆಯಾಗದಂತೆ ನಡೆಸಲು ಸೂಚಿಸಿದರು. ಹಾಗೆಯೇ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು ಮತ್ತು ನಾಲ್ಕು ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರುಗಳಿಗೆ ಜವಾಬ್ದಾರಿಯನ್ನು ವಹಿಸಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಯಶಸ್ವಿಯಾಗಿ ಸಂಘಟಿಸಲು ಸೂಚಿಸಿದರು.
ಸಭೆಯಲ್ಲಿ ರಾಮನಗರ ನಗರಸಭೆ ಪೌರಾಯುಕ್ತರಾದ ಜಯಣ್ಣ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.