ಮಂಗಳೂರು (ದಕ್ಷಿಣ ಕನ್ನಡ): ಅನಾರೋಗ್ಯದಿಂದ ಮೃತರಾದ ತನ್ನ ತಮ್ಮನ ಅಂತಿಮ ದರ್ಶನಕ್ಕೆ ಗುಜರಾತಿನಿಂದ ಬಂದ ಅಣ್ಣ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ನಿಡ್ಡೋಡಿಯಲ್ಲಿ ನಡೆದಿದೆ.
ಪ್ರವೀಣ್ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಅಂತಿಮ ದರ್ಶನಕ್ಕೆ ಬಂದ ಅಣ್ಣ ಸಾಯಿ ಪ್ರಸಾದ್ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಅವರು ಮೃತಪಟ್ಟಿದ್ದಾರೆ. ಕ್ರಿಕೆಟ್, ಕ್ರೀಡೆ, ಜನಪರ ಸೇವೆ ಎಂದು ಹೆಸರು ಮಾಡಿಕೊಂಡಿದ್ದ ಪ್ರವೀಣ್ ಅವರು ಕೆಲಕಾಲದ ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು.ಸಾಕಷ್ಟು ಖರ್ಚು ಮಾಡಿದ್ದರೂ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದರು.
ಸಹೋದರ ಮೃತಪಟ್ಟ ಸುದ್ಧಿ ತಿಳಿದು ಗುಜರಾತ್ ನಲ್ಲಿದ್ದ ಅವರ ಅಣ್ಣ ಸಾಯಿ ಪ್ರಸಾದ್ ಅವರು ಪತ್ನಿ ಸಮೇತ ಊರಿಗೆ ಬಂದಿದ್ದರು. ಅವರ ಬರುವಿಕೆಗಾಗಿಯೇ ಮನೆಮಂದಿ ಕಾದಿದ್ದರೆನ್ನಲಾಗಿದೆ. ಆದರೆ ಸಾಯಿಪ್ರಸಾದ್ ಮನೆಗೆ ಬಂದು ಸಹೋದರನ ಮೃತದೇಹ ನೋಡುತ್ತಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರೆನ್ನಲಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ.
ಒಂದೇ ಮನೆಯಲ್ಲಿ ನಡೆದ ಅಣ್ಣ ತಮ್ಮಂದಿರಿಬ್ಬರ ಸಾವು ಮನೆಮಂದಿ ಮಾತ್ರವಲ್ಲದೆ ಇಡೀ ನಿಡ್ಡೋಡಿ ಪರಿಸರದಲ್ಲಿ ದಿಗ್ಭ್ರಮೆ ಮೂಡಿಸಿದೆ. ಇಡೀ ಪರಿಸರ ದುಃಖ ಸಾಗರದಲ್ಲಿ ಮುಳುಗಿದೆ.