ಬೆಂಗಳೂರು: ಕಟ್ಟಡದ ಸ್ವಾಧೀನ ಪತ್ರ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶವಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಡಾ.ಅಶ್ವತ್ಥನಾರಾಯಣ ಆಕ್ಷೇಪಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಕೆ.ಜೆ.ಜಾಜ್, ‘ಕಟ್ಟಡದ ಸ್ವಾಧೀನ ಪತ್ರವಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಅಲ್ಲದೆ 2025ರ ಮಾರ್ಚ್ 13ರಂದು ಈ ಸಂಬಂಧ ಕೆಇಆರ್‍ಸಿ ಆದೇಶವಿದೆ. ಕಾಯ್ದೆಗೆ ತಿದ್ದುಪಡಿಯಾಗದ ಹೊರತು ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದಿಲ್ಲ ಎಂದು ವಿವರಣೆ ನೀಡಿದರು.
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿದ್ಯುತ್ ಸಂಪರ್ಕಕ್ಕಾಗಿ 4 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸ್ವಾಧೀನಪತ್ರ ಹಾಗೂ ಕಟ್ಟಡ ಮುಕ್ತಾಯದ ಪ್ರಮಾಣ ಪತ್ರವಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದೆಂಬ ಕೋರ್ಟ್ ಆದೇಶವಿದ್ದರೆ ನೀಡಲಿ. ಇಂದೇ ಸರಕಾರ ಆದೇಶ ಹೊರಡಿಸಿ ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಸ್ಪಷ್ಟಣೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಡಾ.ಅಶ್ವತ್ಥನಾರಾಯಣ, ಕೆಇಆರ್‍ಸಿ ಆದೇಶವಿಲ್ಲದಿದ್ದರೂ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಅಕ್ರಮ-ಸಕ್ರಮ ನಿಯಮಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬಹುದು. ಶೇ.15ರಷ್ಟು ವಿನಾಯಿತಿ ಕೊಟ್ಟರೆ ಉಪಯೋಗವಿಲ್ಲ. ಎಲ್ಲರಿಗೂ ವಿನಾಯಿತಿ ಕೊಡಿ ಎಂದು ಆಗ್ರಹಿಸಿದರು.