ಮೈಸೂರು: ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮಹಾನಗರ ಪಾಲಿಕೆಯ ೬೫ ವಾರ್ಡ್‌ಗಳಿಗೆ ತಲಾ ೭೫ ಲಕ್ಷ ರೂ. ಮೇಯರ್ ಅನುದಾನ ನೀಡಲು ಶುಕ್ರವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ದೊರೆಯಿತು.
ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಸದಸ್ಯರ ಒತ್ತಾಯದ ಮೇರೆಗೆ ಮೇಲಿನ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಸೂಚಿ ಮಂಡನೆಗೂ ಮುನ್ನವೇ ೧ ಕೋಟಿ ರೂ. ಅನುದಾನ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮೇಯರ್ ಶಿವಕುಮಾರ್ ಅವರನ್ನು ಒತ್ತಾಯಿಸಿದರು.
೨೦೨೨-೨೩ರ ಅವಧಿಯಲ್ಲಿ ನೀಡಿರುವ ೭೫ ಲಕ್ಷ ರೂ. ಅನುದಾನಕ್ಕೆ ಈಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಾಲಿಕೆಯ ಈ ಅವಧಿ ಪೂರ್ಣಗೊಳ್ಳಲು ಕೆಲವೇ ತಿಂಗಳು ಬಾಕಿಯಿದ್ದು, ಈಗ ಅನುದಾನ ನೀಡಿದರೆ ಮಾತ್ರ ಬಳಸಲು ಸಾಧವಾಗುತ್ತದೆಂದು ಆಗ್ರಹಿಸಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಪಾಲಿಕೆ ನೂತನ ಆಯುಕ್ತ ಅಷಾದ್ ಉರ್ ರೆಹಮಾನ್ ಷರೀಫ್, ನೆನ್ನೆಯಷ್ಟೇ ಅಧಿಕಾರ ಸ್ವೀಕರಿಸಿzನೆ. ಅಧಿಕಾರಿಗಳ ಸಭೆ ಮಾಡಲು ಸಾಧವಾಗಿಲ್ಲ. ಪಾಲಿಕೆ ಆರ್ಥಿಕ ಪರಿಸ್ಥಿತಿ ಪರಿಶೀಲಿಸಲು ಸಮಯಬೇಕಾಗುತ್ತದೆ. ತಕ್ಷಣಕ್ಕೆ ೨೫ ಲಕ್ಷ ರೂ. ನೀಡಲಾಗುವುದು. ಮುಂದಿನ ವಾರವೇ ಮತ್ತೊಂದು ಸಭೆ ಕರೆಯುವುದಾಗಿ ಹೇಳಿದರು.
ಇದಕ್ಕೆ ಒಪ್ಪದ ಸದಸ್ಯರು ಈಗ ೭೫ ಲಕ್ಷ ರೂ. ನೀಡಿ, ಮುಂದಿನ ಸಭೆಯಲ್ಲಿ ೨೫ ಲಕ್ಷ ರೂ. ನೀಡುವಂತೆ ಒತ್ತಾಯಿಸಿದರು. ಬಿಜೆಪಿ ಸದಸ್ಯ ರಮೇಶ್ ೫೦ ಲಕ್ಷ ರೂ. ನೀಡಿದರೆ ಸಾಕೆಂದು ಪ್ರತಿಕ್ರಿಯಿಸಿದರು. ಈ ವೇಳೆ ಮದ್ಯ ಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಅಯೂಬ್ ಖಾನ್ ಪಾಲಿಕೆ ಆರ್ಥಿಕ ಸ್ಥಿತಿ ಗಮನದಲ್ಲಿರಿಸಿಕೊಂಡು ಅನುದಾನ ಕೆಳಬೇಕಿದೆ ಎಂದರು. ಈ ವೇಳೆಯೂ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ೧ ಕೋಟಿ ರೂ. ನೀಡುವಂತೆ ಆಗ್ರಹಿಸಿದರು. ಆಯುಕ್ತರೊಂದಿಗೆ ಚರ್ಚಿಸಿದ ಮೇಯರ್ ಶಿವಕುಮಾರ್ ಪ್ರತಿ ಸದಸ್ಯರಿಗೆ ೭೫ ಲಕ್ಷ ರೂ. ನೀಡುವುದಾಗಿ ಪ್ರಕಟಿಸಿ, ಶೀಘ್ರದಲ್ಲಿ ಟೆಂಡರ್ ಕರೆದು ವರ್ಕ್ ಆರ್ಡರ್ ನೀಡುವಂತೆ ಸೂಪರಿಡೆಂಟ್ ಎಂಜಿನಿಯರ್ ಅವರಿಗೆ ಸೂಚಿಸಿದರು.
ಅನುಪಯುಕ್ತವಾದ ಟ್ಯಾಬ್: ಪಾಲಿಕೆ ಸದಸ್ಯರಿಗೆ ನೀಡಿರುವ ಟ್ಯಾಬ್ ನಿರ್ವಹಣೆ ಕುರಿತಂತೆ ಸದಸ್ಯ ಕೆ.ವಿ.ಶ್ರೀಧರ್ ಸಭೆಯ ಗಮನಸೆಳೆದರು. ಟ್ಯಾಬ್ ಅನುಪಯುಕ್ತವಾಗಿದ್ದು, ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಈ ವೇಳೆ ಪರ ವಿರೋಧ ವ್ಯಕ್ತವಾಯಿತು.
ಅಜೆಂಡಾಗೆ ಆಗ್ರಹ: ಅಜೆಂಡಾ ನೀಡದೆ ಸಭೆ ನಡೆಸುತ್ತಿರುವುದಕ್ಕೆ ಜೆಡಿಎಸ್ ಸದಸ್ಯ ಎಸ್‌ಬಿಎಂ ಮಂಜು ಆಕ್ರೋಶ ವ್ಯಕ್ತಪಡಿಸಿದರು. ಅಜೆಂಡಾ ಇಲ್ಲದೇ ಸಭೆ ನಡೆಸಬಹುದೇ ಎಂದು ಕೌನ್ಸಿಲ್ ಕಾರ್ಯದರ್ಶಿ ಉತ್ತರಿಸಬೇಕೆಂದು ಒತ್ತಾಯಿಸಿದರು. ಕೌನ್ಸಿಲ್ ಕಾರ್ಯದರ್ಶಿ ಉತ್ತರಕ್ಕೂ ಸಮಾಧಾನಗೊಳ್ಳದೇ ಮಾತು ಮುಂದುವರಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ನನ್ನ ಅವಧಿ ಸೆಪ್ಟೆಂಬರ್‌ಗೆ ಮುಗಿಯಲಿದೆ. ಸದಸ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆದಿzನೆ. ಮುಂದಿನ ಸಭೆಯಲ್ಲಿ ಅಜೆಂಡಾದ ಮೇಲೆ ಚರ್ಚೆ ಮಾಡೋಣ ಎಂದು ಸಮಾಧಾನಪಡಿಸಿದರು.
ಹೆಚ್ಚುವರಿ ಪೌರಕಾರ್ಮಿಕರ ನೇಮಕ: ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಕೊರತೆ ಇದೆ. ೫ರಿಂದ ೧೦ ಪೌರಕಾರ್ಮಿಕರು ಪ್ರತಿನಿತ್ಯ ಕರ್ತವ್ಯಕ್ಕೆ ಗೈರಾಗುತ್ತಿದ್ದಾರೆ. ಇದರಿಂದ ಕಸ ವಿಲೇವಾರಿ ಕಷ್ಟವಾಗಿದೆ. ಇತರೆ ಕೆಲಸಗಳಿಗೂ ಅಡಚಣೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆಯೂಬ್ ಖಾನ್ ಸಭೆಯ ಗಮನಸೆಳೆದರು.
ಈ ವರ್ಷದ ಸ್ವಚ್ಛ ಭಾರತ ಮಿಷನ್ ಸರ್ವೇ ಆರಂಭಗೊಂಡಿದೆ. ಪ್ರಥಮ ಸ್ಥಾನ ಪಡೆಯಲು ಎಲ್ಲರೂ ಸಂಘಟಿತರಾಗಿ ಕೆಲಸ ಮಾಡಬೇಕಿದೆ. ಆಯುಕ್ತರ ಸಹಿತವಾಗಿ ಎಲ್ಲರ ಮೇಲೆ ಜವಾಬ್ದಾರಿ ಇದೆ. ಅಗತ್ಯ ಸಿಬ್ಬಂದಿಯೇ ಇಲ್ಲದಿದ್ದರೆ ಸ್ವಚ್ಛತೆಯಲ್ಲಿ ಸ್ಥಾನ ಪಡೆಯುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ಇಂಧೋರ್ ಅಧಯನ ಪ್ರವಾಸದ ವೇಳೆ ಪೌರಕಾರ್ಮಿಕರು ೨ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿzವೆ. ಪ್ರತಿ ವಾರ್ಡಿಗೆ ಮೂವರು ಪೌರಕಾರ್ಮಿಕರನ್ನು ಕೊಡಬಹುದು. ಈ ಬಗ್ಗೆ ಚರ್ಚಿಸಿ ನಿರ್ಣಯಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಆಡಳಿತ ಪಕ್ಷದ ನಾಯಕರನ್ನಾಗಿ ವಾರ್ಡ್ ಸಂಖ್ಯೆ ೫೫ರ ಸದಸ್ಯ ಮ.ವಿ.ರಾಮಪ್ರಸಾದ್ ಅವರನ್ನು ನೇಮಕ ಮಾಡಲಾಯಿತು.