ಬೆಂಗಳೂರು: ಹೊರ ರಾಜ್ಯದಿಂದ ಜಾನುವಾರುಗಳನ್ನು ತಂದು ನಮ್ಮ ರಾಜ್ಯದ ಕಾಡಿನಲ್ಲಿ ಮೇಯಿಸುವುದನ್ನು ನಿಷೇಧಿಸಲು ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.
ಕಲಾಪದಲ್ಲಿ ಉತ್ತರಿಸುವ ವೇಳೆ ಮಾತಾಡಿದ ಈಶ್ವರ್ ಖಂಡ್ರೆ, ಅರಣ್ಯ ಸಂಪತ್ತು ಹಾಗೂ ಪ್ರಾಣಿ ಸಂರಕ್ಷಣೆಗೆ ಕಠಿಣ ನಿಲುವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ತೀರ್ಮಾನ ಮಾಡಿದ್ದು, ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚಿಸಿರೋದಾಗಿ ಹೇಳಿದರು.
ಇನ್ನು, ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವು ಸಂಭವಿಸಿದಾಗ ತಮಿಳುನಾಡಿನಿಂದ ಸಾವಿರಾರು ಜಾನುವಾರುಗಳನ್ನು ತಂದು ನಮ್ಮ ಅರಣ್ಯ ನಾಶ ಪಡಿಸುತ್ತಿರುವ ಅಂಶ ವರದಿಯಲ್ಲಿ ತಮ್ಮ ಗಮನಕ್ಕೆ ಬಂದ ಬಳಿಕ, ಹೊರ ರಾಜ್ಯದ ಜಾನುವಾರನ್ನು ನಮ್ಮ ಕಾಡಿನಲ್ಲಿ ಮೇಯಿಸುವುದಕ್ಕೆ ನಿಷೇಧ ಹೇರಲಾಗಿದೆ. ನಮ್ಮ ರಾಜ್ಯದ ಕುರಿಗಾಹಿಗಳಿಗೆ ತೊಂದರೆ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಖಂಡ್ರೆ ಸ್ಪಷ್ಟಪಡಿಸಿದರು.
ಡೀಮ್ಡ್ ಅರಣ್ಯದ ಬಗ್ಗೆ ಈಗಾಗಲೇ ಮರು ಸಮೀಕ್ಷೆ ನಡೆಯುತ್ತಿದೆ. ಸರ್ವೋನ್ನತ ನ್ಯಾಯಾಲಯ ಮತ್ತೊಂದು ಅವಕಾಶ ನೀಡಿದ್ದು, ಸಮೀಕ್ಷೆಯಲ್ಲಿ ಅರಣ್ಯದಂತೆ ಇಲ್ಲದ ಯಾವ ಪ್ರದೇಶ ಕೈಬಿಡಬಹುದು ಯಾವುದನ್ನು ಸೇರಿಸಬಹುದು ಎಂಬುದನ್ನು ಪರಾಮರ್ಶಿಸಲಾಗುವುದು ಎಂದು ತಿಳಿಸಿದರು.
ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಿಕೊಳ್ಳಲು ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ, ಪರ್ಯಾಯ ಭೂಮಿ ಮತ್ತು ಎನ್.ಪಿ.ವಿ. ಶುಲ್ಕ ಪಾವತಿಸಿ ನಿಯಮಾನುಸಾರ ಅನುಮತಿ ಪಡೆಯಲು ಅವಕಾಶವಿದೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಸಾಕು ಪ್ರಾಣಿಗಳು ಕಾಡಿನಲ್ಲಿ ಮೇಯುವುದರಿಂದ ಕಾಡಿನಲ್ಲಿರುವ ಸಸ್ಯಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತದೆ. ಇದಕ್ಕಿಂತಲು ಹೆಚ್ಚಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ವನ್ಯಜೀವಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ ಎಂಬ ಅಂಶವನ್ನೂ ಉಲ್ಲೇಖಿಸಿದ್ದಾರೆ.
ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಅಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳವಾಗುತ್ತದೆ, ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಕೂಡಲೇ ಅಭಯಾರಣ್ಯಗಳಲ್ಲಿ ಮೇಕೆ, ಕುರಿ, ದನಕರುಗಳನ್ನು ಮೇಯಿಸುವುದನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಪ್ರೇಮಿಗಳು, ಪರಿಸರವಾದಿಗಳು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮವಹಿಸಲು ಸೂಚಿಸಿದ್ದಾರೆ.
ಕಾಡಿನಲ್ಲಿರುವ ವನ್ಯಜೀವಿಗಳು ಮೇಯಲು ಹೋದ ದನಕರುಗಳನ್ನು ಕೊಂದಾಗ, ಆಕ್ರೋಶಗೊಂಡು ಕೆಲವರು ಮೃತ ಜಾನುವಾರುಗಳಿಗೆ ವಿಷಹಾಕುವ ಕಾರಣ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇದಕ್ಕೆ ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಾವಿಗೀಡಾಗಿರುವುದೇ ಸಾಕ್ಷಿಯಾಗಿದೆ ಎಂದೂ ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿರುತ್ತಾರೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.