ದಕ್ಷಿಣ ಕನ್ನಡ: ಧರ್ಮಸ್ಥಳದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ಅವರು ನಾಲ್ವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನ ಹೂತಿಟ್ಟಿದ್ದೇನೆ ಎಂದು ಸಮಾಜದ ಮುಂದೆ ಬಂದಿದ್ದಾನೆ. ಇದರ ನಂತರ ಈ ವಿಚಾರವಾಗಿ ಅನೇಕ ಬೆಳವಣಿಗೆ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಹ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅನೇಕ ಜನರು ಈ ಬಗ್ಗೆ ವಿಡಿಯೋಗಳನ್ನ ಮಾಡಿ ಹಾಕುತ್ತಿದ್ದಾರೆ. ಆದರೆ ಕೆಲವರು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಆರೋಪ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸದ್ಯ ದೂರು ದಾಖಲಾಗಿದ್ದು, ಸೌಜನ್ಯ ಹೋರಾಟದಲ್ಲಿ ಮುಂದಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಾಕುತ್ತಿರುವ ಯೂಟ್ಯೂಬರ್ ಸಮೀರ್, ಸುಜಾತ್ ಭಟ್ ವಿರುದ್ಧ ಸ್ನೇಹಮಯಿ ಕೃಷ್ಣ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಭಜರಂಗದಳದ ತೇಜಸ್ ಗೌಡ ಅವರು ಈ ವಿಚಾರವಾಗಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಆರೋಪಗಳನ್ನ ಮಾಡುವ ಮೂಲಕ ಹಾಗೂ ಕೆಲ ವಿಡಿಯೋಗಳನ್ನ ಹಾಕುವ ಮೂಲಕ ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿಡಿಯೋಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವ ಕೆಲಸವನ್ನ ಯೂಟ್ಯೂಬರ್ ಮಾಡುತ್ತಿದ್ದು, ಒಂದು ಧಾರ್ಮಿಕ ಕೇಂದ್ರದ ತೇಜೋವಧೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತೇಜಸ್ ಆಗ್ರಹ ಮಾಡಿದ್ದು, ಈ ರೀತಿ ಕಷೇತ್ರದ ಬಗ್ಗೆ ಅಪಪ್ರಚಾರ ಮಾಡುವ ವಿಡಿಯೋಗಳನ್ನ ಮಾಡಿ ಹಾಕುವುದಕ್ಕೆ ಅಕ್ರಮ ಹಣ ಬರುತ್ತಿರುವ ಬಗ್ಗೆ ಅನುಮಾನ ಮೂಡಿದೆ. ಅಲ್ಲದೇ, ಈ ಬಗ್ಗೆ ವಿಡಿಯೋ ಮಾಡಲು ಕೆಲವು ಯೂಟ್ಯೂಬರ್ಸ್ ಗಳಿಗೆ ಬೇರೆ ಬೇರೆ ದೇಶದಿಂದ ಹಣ ಬರುತ್ತಿದೆ. ಈ ಬಗ್ಗೆ ಸಹ ತನಿಖೆ ಮಾಡಬೇಕಾಗಿದೆ ಎಂದು ತೇಜಸ್ ಮನವಿ ಮಾಡಿದ್ದು, ಬೆಂಗಳೂರಿನ ಇಡಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಇನ್ನು ದೂರು ಸ್ವೀಕರಿಸಿರುವ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಾಕಿದ್ದ ಸಮೀರ್, ನಂತರ ಅನಾಮಿಕ ವ್ಯಕ್ತಿ ನೂರಾರು ಶವಗಳನ್ನ ಹೂತು ಹಾಕಿದ್ದೇನೆ ಎಂದು ಎದುರು ಬಂದ ನಂತರ ಸಾಲು ಸಾಲು ವಿಡಿಯೋಗಳನ್ನ ಮಾಡಿ ಹಾಕಿದ್ದಾರೆ. ಈ ವಿಡಿಯೋದಲ್ಲಿ ಧರ್ಮಸ್ಥಳದ ವಿಚಾರವಾಗಿ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.