Sunday, April 20, 2025
Google search engine

Homeಸ್ಥಳೀಯಸ್ಮೃತಿ ಅನನ್ಯತೆ, ಅಪೂರ್ವತೆ ಒಳಗೊಂಡ ಕೃತಿ

ಸ್ಮೃತಿ ಅನನ್ಯತೆ, ಅಪೂರ್ವತೆ ಒಳಗೊಂಡ ಕೃತಿ


ಮೈಸೂರು: ವಿಕ್ರಂ ಚದುರಂಗ ಅವರ ಸ್ಮೃತಿ (ಸಾಂಸ್ಕೃತಿಕ ಸಂಕಥನ) ಕೃತಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.
ಸಂವಹನ ಪ್ರಕಾಶನ ವತಿಯಿಂದ ನಗರದ ಗಾನಭಾರತೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಿದ್ವಾಂಸರಾದ ಪ್ರೊ.ಹಂಪನಾ ಕೃತಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಸ್ಮೃತಿ ಹಲವು ಆಯಾಮಗಳ, ಅನನ್ಯತೆ ಮತ್ತು ಅಪೂರ್ವತೆಯನ್ನು ಒಳಗೊಂಡ ಪುಸ್ತಕವಾಗಿದೆ. ವಿಕ್ರಂ ಅವರ ತಂದೆ ಚದುರಂಗ ಅವರು ನನ್ನ ಬದುಕಿನಲ್ಲಿ ಆಳವಾದ ಮತ್ತು ಗಾಢವಾದ ನೆನಪುಗಳನ್ನು ಬಿತ್ತಿದ್ದಾರೆ. ನಾನು ಮಹಾರಾಜ ಕಾಲೇಜಿನಲ್ಲಿ ಓದುವಾಗಲೇ ಚದುರಂಗ ಅವರ ಪರಿಚಯವಿತ್ತು. ಆನಂತರ ಕುವೆಂಪು, ದೇಜಗೌ ಇತರೆ ಸಾಹಿತಿಗಳ ಸಹಾಯದಿಂದ ಚದುರಂಗ ಅವರು ಮತ್ತಷ್ಟು ಹತ್ತಿರವಾದರು. ಆನಂತರ ನಾನು ಬರೆದ ನೆನಪಿನಂಗಳದಲ್ಲಿ ಮಾಸ್ತಿ ಎಂಬ ಸಣ್ಣ ಪುಸ್ತಕಕ್ಕೆ ಚದುರಂಗ ಅವರು ಮುನ್ನುಡಿ ಬರೆದಿದ್ದರು ಎಂಬುದನ್ನು ಸ್ಮರಿಸಿದರು.
ವಿಕ್ರಂ ಅವರು ಪುಸ್ತಕದಲ್ಲಿ ತನ್ನ ತಾಯಿ-ತಂದೆಯ ವ್ಯಕ್ತಿತ್ವವನ್ನು ಅದ್ಬುತವಾಗಿ ಪದಗಳಲ್ಲಿ ರೂಪಿಸಿದ್ದಾರೆ. ಕೆಲವು ಪುಟಗಳನ್ನು ಓದುವಾಗ ಖುಷಿ, ಆರ್ದ್ರತೆ, ನೋವು ಹೀಗೆ ಅನೇಕ ಭಾವಗಳು ಹುಟ್ಟುತ್ತವೆ. ಚದುರಂಗ ಅವರ ಚಿತ್ರವನ್ನು ಕುಂಚದಲ್ಲಿ ಒಬ್ಬ ಚಿತ್ರಕಲಾವಿದ ಎಷ್ಟು ಚಂದವಾಗಿ ಚಿತ್ರಿಸಬಹುದೋ, ಅಷ್ಟು ಚಂದವಾಗಿ ವಿಕ್ರಂ ಅವರು ಶಬ್ಧಗಳಲ್ಲಿ ಅವರ ವ್ಯಕ್ತಿತ್ವ ರೂಪಿಸಿದ್ದಾರೆ. ಇನ್ನು ಅವರ ತಾಯಿಯ ವ್ಯಕ್ತಿತ್ವ ಚಿತ್ರಣವನ್ನು ಅಮೃತಪುತ್ಥಳಿ ನಿಲ್ಲಿಸಿದ ಹಾಗೆ ಅಕ್ಷರಗಳಲ್ಲಿ ರೂಪಿಸಿದ್ದಾರೆ. ಈ ಮೂಲಕ ತನ್ನ ತಂದೆ ತಾಯಿಗೆ ಕೃತಜ್ಞನೆ ಸಲ್ಲಿಸಿದ್ದಾರೆ ಎಂದರು.
ಇನ್ನು ತನ್ನ ಸಂಗಾತಿ ವಿಜಯಲಕ್ಷ್ಮಿ ಅರಸ್ ಅವರ ಬಗ್ಗೆಯೂ ಅದ್ಬುತವಾಗಿ ಬರೆದಿದ್ದಾರೆ. ಸಹಜೀವನದ ಸೌಖ್ಯ, ಕಷ್ಟ-ಸುಖಗಳ ಹಂಚಿಕೆಯ ಬಗ್ಗೆ ವಿವರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಮತ್ತು ಚದುರಂಗ ಅವರ ನಡುವಿನ ಸಂಬಂಧವನ್ನು ಸ್ವಂತ ಮತ್ತು ಸಾಹಿತ್ಯಿಕ ಲಾಭಗಳಿಗೆ ಬಳಸಿಕೊಳ್ಳಲು ಕೆಲವು ಸಾಹಿತಿಗಳು ಚದುರಂಗ ಅವರ ಸಾಹಿತ್ಯವನ್ನು ಹೇಗೆ ಹೊಗಳುತ್ತಿದ್ದರು ಎಂಬುದನ್ನು ಇಲ್ಲಿ ಹೇಳಿದ್ದು, ಅದನ್ನು ತೇಲಿಸಿ ಬರೆದಿದ್ದಾರೆ ಎಂದರು.
ಪುಸ್ತಕದ ಕುರಿತು ಮಾತನಾಡಿದ ವಿಶ್ರಾಂತ ಕುಲಪತಿ ಡಾ.ಪದ್ಮಶೇಖರ್ ಮಾತನಾಡಿ, ವಿಕ್ರಂ ಚದುರಂಗ ಅವರ ಸ್ಮೃತಿ (ಸಾಂಸ್ಕೃತಿಕ ಸಂಕಥನ) ಕೃತಿಯೂ ಭೂತ ಮತ್ತು ವರ್ತಮಾನ ಆಧರಿಸಿರುವ ಕೃತಿಯಾಗಿದೆ. ಜೀವನ ಮೌಲ್ಯಗಳು, ಅಲ್ಲಲ್ಲಿ ಅನಾವರಣಗೊಳ್ಳುವ ಇತಿಹಾಸದ ಎಳೆಗಳು, ಲೇಖಕರ ಸ್ವಗತ, ಸ್ವಂತಿಕೆಗಳು, ಈ ಎಲ್ಲದರ ಒಟ್ಟು ಮೊತ್ತವಾಗಿರುವ ಸ್ಮೃತಿ ಓದುಗರ ಗಮನ ಸೆಳೆದು, ಕುತೂಹಲ ಮೂಡಿಸುತ್ತದೆ ಎಂದರು.
ಓದುಗರನ್ನು ಕೆಲಕಾಲ ನಿಲ್ಲಿಸಿ, ಅನುಸಂಧಾನಿಸುವಂತೆ ಪ್ರೇರೇಪಿಸುತ್ತದೆ. ಸ್ಮೃತಿಯ ಆಕೃತಿಯ ನಿರ್ಮಾಣದಲ್ಲಿ ವಿಕ್ರಂ ಅವರು ಮಾಡಿರುವ ಸಿದ್ಧತೆ, ತೋರಿರುವ ಶ್ರದ್ಧೆ, ವಿಸ್ತಾರವಾದ ಓದಿನ ಹಿನ್ನೆಲೆ ಗಮನಿಸುವಂತದ್ದಾಗಿದ್ದು, ಇದೆಲ್ಲದಕ್ಕಿಂತ ಭಿನ್ನವಾದ ಹೊಸತರನಾದ ನಿರೂಪಣಾ ತಂತ್ರವನ್ನು ಅವರು ಪ್ರಯೋಗಿಸಿದ್ದಾರೆ. ಈ ತಂತ್ರ ಓದುಗರನ್ನು ತಟ್ಟನೆ ಸ್ಪರ್ಶಿಸಿ ಬಿಡುತ್ತದೆ. ಸ್ಮೃತಿಯಲ್ಲಿ ಅನನ್ಯ ಜೀವನ ಪ್ರೀತಿ ಇದೆ, ಮಾನವೀಯ ಅಂತಕರಣವಿದೆ, ಸಹನೆ, ತ್ಯಾಗಗಳು ಇವೆ. ಬದುಕು ಗೆಲ್ಲುವ ದಾರಿಗಳು ಇವೆ. ನೋವು-ನಲಿವುಗಳು, ಭರವಸೆ ಮತ್ತು ಆತ್ಮವಿಶ್ವಾಸಗಳು ಇವೆ ಎಂದರು.
ಪುಸ್ತಕದ ಮೊದಲ ಪ್ರತಿಯನ್ನು ದಿ.ದೇವರಾಜ ಅರಸು ಅವರ ಮೊಮ್ಮಗ, ಕಾಂಗ್ರೆಸ್ ಮುಖಂಡರಾದ ಸೂರಜ್ ಹೆಗ್ಡೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಲೇಖಕ ವಿಕ್ರಂ ಚದುರಂಗ, ಪ್ರಕಾಶಕ ಡಿ.ಎನ್.ಲೋಕಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular