Friday, August 22, 2025
Google search engine

Homeರಾಜ್ಯಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಮೂರ್ತಿಗೆ ನಿಷೇಧ - ಮಣ್ಣಿನ ಗಣಪನಿಗಾಗಿ ಮುಚ್ಚಳಿಕೆ ಕಡ್ಡಾಯ: ಸಚಿವ ಖಂಡ್ರೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಮೂರ್ತಿಗೆ ನಿಷೇಧ – ಮಣ್ಣಿನ ಗಣಪನಿಗಾಗಿ ಮುಚ್ಚಳಿಕೆ ಕಡ್ಡಾಯ: ಸಚಿವ ಖಂಡ್ರೆ

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‍ಗೆ ಅನುಮತಿ ನೀಡುವ ಮುನ್ನ ಗಣೇಶೋತ್ಸವ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಗುರುವಾರ ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಓಪಿ ಮೂರ್ತಿಗಳ ಬಳಕೆ ಜಲಚರ ಜೀವಿಗಳಿಗೆ ಹಾನಿಕಾರಕವಾಗಿರುವುದರಿಂದ, ಮಣ್ಣಿನ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕೆಂದು ಹೇಳಿದರು.

ಅವರು ಮುಂದಾಗಿ, ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಣ್ಣಿನ ಮೂರ್ತಿಗಳೇ ಬಳಕೆಯಾಗುತ್ತಿದೆ. ಇಂತಹ ಉತ್ತಮ ಪ್ರಚಾರದ ಮಾದರಿಯನ್ನು ಇತರೆ ಜಿಲ್ಲೆಗಳಲ್ಲಿಯೂ ಅನುಸರಿಸಬೇಕು ಎಂದು ಹೇಳಿದರು. ಪಿಓಪಿ ಮೂರ್ತಿಗಳು ನೀರಲ್ಲಿ ಕರಗದೇ, ವಿಷಕಾರಕ ಲೇಪನಗಳಿಂದ ನೀರಿಗೆ ಹಾನಿ ಮಾಡುತ್ತವೆ. ಜಲಚರ ಜೀವಿಗಳ ಸಾವಿಗೆ ಕಾರಣವಾಗಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಶಾಲೆ-ಕಾಲೇಜು ಮಕ್ಕಳಿಗೆ ಪರಿಸರ ಸ್ನೇಹಿ ಮೂರ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಹಾಗೂ ಸ್ಥಳೀಯ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕು. ಪಟಾಕಿಗಳ ವಿಚಾರದಲ್ಲಿ, ಸುಪ್ರೀಂ ಕೋರ್ಟ್ ನೀಡಿದ ಮಾರ್ಗಸೂಚಿಯಂತೆ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ 125 ಡೆಸಿಬೆಲ್ ಮಿತಿ ಪಾಲಿಸಬೇಕು. ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶವಿರಬೇಕು ಎಂದು ಅವರು ಮನವಿ ಮಾಡಿದರು.

‘ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ ಮತ್ತು ಸುಟ್ಟರೆ ಗಾಳಿಗೆ ವಿಷಕಾರಕ ಅಂಶ ಸೇರಿಸುವ ಏಕಬಳಕೆ ಪ್ಲಾಸ್ಟಿಕ್ ಉತ್ಪನ್ನ ನಿಷೇಧಿಸಲಾಗಿದೆ. ಆದರೂ ಹಾದಿ-ಬೀದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೋಡುತ್ತೇವೆ. ಈ ಬಗ್ಗೆ ಜಾಗೃತಿ ಅಗತ್ಯ. ಸ್ಥಳೀಯ-ಸಂಸ್ಥೆಗಳು ಪರಿಣಾಮಕಾರಿಯಾಗಿ ಈ ಸಮಸ್ಯೆ ಪರಿಹರಿಸಬೇಕು ಎಂದರು.

ಇಡೀ ವಿಶ್ವ ಎದುರಿಸುತ್ತಿರುವ ದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಆಗಿದೆ. ತಾಪಮಾನ ಏರಿಕೆಯಿಂದ ತಿಂಗಳಲ್ಲಿ ಬೀಳುವ ಮಳೆ ಒಂದು ವಾರದಲ್ಲಿ, ಒಂದು ವಾರದ ಮಳೆ ಒಂದೇ ದಿನ ಬೀಳುತ್ತಿದ್ದು, ಅತಿವೃಷ್ಟಿಯಿಂದ ಅನಾಹುತ ಸಂಭವಿಸುತ್ತಿದೆ. ಹೀಗಾಗಿ ಇರುವ ಒಂದು ಭೂಮಿಯನ್ನು ರಕ್ಷಿಸುವ ಹೊಣೆ ನಮ್ಮ ನಿಮ್ಮಲ್ಲರ ಮೇಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular