Saturday, August 23, 2025
Google search engine

Homeಅಪರಾಧಮಂಗಳೂರಿನಲ್ಲಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ 15 ಕೋಟಿ ವಂಚನೆ: ನಾಲ್ವರ ಬಂಧನ

ಮಂಗಳೂರಿನಲ್ಲಿ ಲಕ್ಕಿ ಸ್ಕೀಮ್ ಹೆಸರಿನಲ್ಲಿ 15 ಕೋಟಿ ವಂಚನೆ: ನಾಲ್ವರ ಬಂಧನ

ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ಸುರತ್ಕಲ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಕಿ ಸ್ಕೀಂ ಹೆಸರಲ್ಲಿ ಸಾವಿರಾರು ಗ್ರಾಹಕರಿಗೆ 15 ಕೋಟಿಗೂ ಅಧಿಕ ವಂಚನೆ ಮಾಡಿದ ಆರೋಪದಲ್ಲಿ ಸುರತ್ಕಲ್‌ ಮತ್ತು ಬಜ್ಪೆಯ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಮಾಡಿ ವಂಚಿಸಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನ ಬಳಿಯ ನಿವಾಸಿ ಅಹ್ಮದ್ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ಬಳಿಯ ನಿವಾಸಿ ನಝೀರ್ ಯಾನೆ ನಾಸಿರ್ (39) ಹಾಗೂ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್‌ನಲ್ಲಿ ವಂಚನೆ ಮಾಡಿದ್ದ ಬಜ್ಪೆ ನಿವಾಸಿ ಮುಹಮ್ಮದ್ ಅಶ್ರಫ್ (43), ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ಹನೀಫ್ (50) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನ್ಯೂ ಶೈನ್ ಎಂಟರ್‌ಪ್ರೈಸಸ್ ಎಂಬ ಲಕ್ಕೀ ಸ್ಕೀಮ್ ಹೆಸರಲ್ಲಿ ಆಕರ್ಷಕ ಹಾಗೂ ಬಂಪರ್ ಬಹುಮಾನ ಕಾರು, ಬೈಕ್, ಪ್ಲಾಟ್, ಚಿನ್ನ ಕೊಡುವುದಾಗಿ ನಂಬಿಸಿ 9 ತಿಂಗಳು 1 ಸಾವಿರ ರೂ.ಯಂತೆ ಪಾವತಿಸಿ ಕೊನೆಯ 2 ತಿಂಗಳು 1500 ರೂ. ಯಂತೆ ಸುಮಾರು 11ತಿಂಗಳ ಕಾಲ ಆರೋಪಿಗಳು ಹಣ ಕಟ್ಟಿಸಿಕೊಂಡಿದ್ದರು. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಮಂದಿಗೆ ಸ್ಕೀಮ್ ಮುಗಿದ ಬಳಿಕ ಬಹುಮಾನ ಅಥವಾ ಕಟ್ಟಿದ ಹಣವನ್ನೂ ನೀಡದೆ 4.20 ಕೋಟಿ ರೂ. ಅಧಿಕ ವಂಚನೆ ಮಾಡಿದ್ದಾರೆ ಎಂದು ಸುರತ್ಕಲ್‌ ಸೂರಿಂಜೆ ನಿವಾಸಿ ಶಿವಪ್ರಸಾದ್ ಎಂಬವರು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಇನ್ನೊಂದು ವಂಚನೆ ಪ್ರಕರಣದಲ್ಲಿ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್‌ ಹೆಸರಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಫ್ಲ್ಯಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ನೀಡುವುದಾಗಿ ನಂಬಿಸಿ ಪ್ರತೀ ತಿಂಗಳು 1000 ರೂ. ನಂತೆ 1 ವರ್ಷದ ಅವಧಿಗೆ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ. ಈ ಸ್ಕೀಮ್‌ ಗೆ ದ.ಕ., ಉಡುಪಿ ಜಿಲ್ಲೆಯ ಸುಮಾರು 13 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಅಥವಾ ಬಹುಮಾನಗಳನ್ನು ನೀಡದೇ ವಂಚಿಸಲಾಗಿದೆ ಎಂದು ಭುಜಂಗ ಎ. ಪೂಜಾರಿ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.

RELATED ARTICLES
- Advertisment -
Google search engine

Most Popular