ಬೆಂಗಳೂರು : ರಾಷ್ಟ್ರೀಯ ಮಕ್ಕಳ ಹಕ್ಕುಗಳ ನಿರ್ದೇಶನಾಲಯದಿಂದ ನೂತನ ವಿನ್ಯಾಸದ ಮಕ್ಕಳ ಸಹಾಯವಾಣಿ 1098 ಲೊಗೋವನ್ನು ಬಿಡುಗಡೆ ಮಾಡಲಾಗಿದ್ದು, ಈ ಲೋಗೋದಲ್ಲಿ 1098 ಚೈಲ್ಡ್ ಲೈನ್ ಹೆಲ್ಪ್ ಲೈನ್ ಎಂದು ಇಂಗ್ಲೀಷ್ ನಲ್ಲಿ ಬರೆದ, ಅಡಿಯಲ್ಲಿ 24×7 ಮತ್ತು ಮೂಲೆಯಲ್ಲಿ ರಿಸೀವರ್ ಚಿಹ್ನೆ, ಮೇಲ್ಬಾಗದಲ್ಲಿ ಬಾಲಕಿ ಮತ್ತು ಬಾಲಕ ತೋರಿಸುವ ರೇಖಾ ಚಿತ್ರಹೊಂದಿದೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯವು ಮಕ್ಕಳ ಮೇಲೆ ಆಗುವ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯ, ಬಿಕ್ಷಾಟನೆಯಿಂದ ಶೋಷಣೆಗೊಳಗಾದ, ಶಿಕ್ಷಣದಿಂದ ವಂಚಿತರಾದ ಹಾಗೂ ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂಥ ಪ್ರಕರಣವನ್ನು ಕಡಿಮೆ ಮಾಡಲು ಮಕ್ಕಳಿಗಾಗಿ 24 ಗಂಟೆ ಚಾಲನೆಯಲ್ಲಿರುವ 1098 ಸಹಾಯವಾಣಿ ದೇಶಾದ್ಯಂತ 1999 ರಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರ ಮೂಲಕ ಪ್ರಾರಂಭಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸೆಪ್ಟೆಂಬರ್ 01, 2023 ರಿಂದ ಪ್ರಾರಂಭವಾಗಿದ್ದು, ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ 1098 ಕಾರ್ಯನಿರ್ವಹಿಸುತ್ತಿದ್ದು ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 112 ಕರೆ ಮಾಡಬಹುದಾಗಿದೆ ಎಂದು ಬೆಂಗಳೂರು ನಗರ ಪಶ್ಚಿಮ (ಆನೇಕಲ್) ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.