ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ಕಿರುಸಾಲ ಮತ್ತು ಸಣ್ಣ ( ಬಲವಂತದ ಕ್ರಮಗಳ ಪ್ರತಿಬಂಧಕ) ಕಾಯ್ದೆ-೨೦೨೫ ಜಾರಿಗೆ ಬಂದಿದ್ದರೂ ಸಹ ಫೈನಾನ್ಸ್ ಕಂಪನಿಗಳು ಕಿರುಕುಳ ಮುಂದುವರೆಸಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲವೆ? ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಪರಿಷತ್ ಕಲಾಪದಲ್ಲಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಚುಕ್ಕೆ ಗುರುತಿನ ಪ್ರಶ್ನೆ ಮೇಲೆ ಮಾತನಾಡಿದ ಅವರು ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕೈಗೊಂಡ ಕ್ರಮಗಳೇನು? ಕಳೆದ ಮೂರು ವರ್ಷದಲ್ಲಿ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸರ್ಕಾರ ನೀಡಿದ ಪರಿಹಾರವೇನು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಕ್ರೋ ಫೈನಾನ್ಸ್‌ಗಳ ಹಾವಳಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಗಳ ಕುಟುಂಬಕ್ಕೆ ೫ ಲಕ್ಷ ರೂ ನೀಡಲಾಗುವುದು ಆತ್ಮಹತ್ಯೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದೇ ನಮ್ಮ ಉದ್ದೇಶವಾಗಿದ್ದು ಈ ಬಗ್ಗೆ ಹಣಕಾಸು ಇಲಾಖೆ ಹಾಗು ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮೈಕ್ರೋ ಫೈನಾನ್ಸಿಯರ್ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ಪರಿಶೀಲಿಸಿ ೨೦೨೪ರಲ್ಲಿ ಸುಗ್ರೀವಾಗ್ಞೆ ತಂದು ಕರ್ನಾಟಕ ಕಿರು ಸಾಲ ಹಾಗು ಸಣ್ಣ ಸಾಲ ಕಾಯ್ದೆ ಜಾರಿ ಮಾಡಿದ ಬಳಿಕ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಕಾನೂನು ಜಾರಿಗೆ ಮುನ್ನ ೨೦೨೩ರಲ್ಲಿ ೮ ಮಂದಿ, ೨೦೨೪ರಲ್ಲಿ ೬ ಮಂದಿ, ಮೃತರಾಗಿದ್ದರು ೨೦೨೫ರ ಫೆಬ್ರವರಿಗೂ ಮುಂಚೆ ೨೪ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಯ್ದೆ ಜಾರಿಯಾದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಇಳಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಧಾನ ಪರಿತ್ ಸದಸ್ಯ ಸಿ.ಎನ್. ಮಂಜೇಗೌಡರ ಪ್ರಶ್ನೆಗೆ ಪರಿಷತ್ ಕಲಾಪದಲ್ಲಿ ತಿಳಿಸಿದರು.