ಚಾಮರಾಜನಗರ: ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ರಂಗಸ್ವಾಮಿ ಅವರ ಸ್ಮರಣಾರ್ಥ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ನೆನಪು ಹಾಗೂ ಸ್ವಾತಂತ್ರ್ಯ ಚಳುವಳಿಯ ವಿಶೇಷ ಕಾರ್ಯಕ್ರಮ ಅಖಿಲ ಕರ್ನಾಟಕ ಕನ್ನಡ ಕನ್ನಡ ಮಹಾಸಭಾ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿತು.
ಉದ್ಘಾಟನೆಯನ್ನು ನೆರವೇರಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ರವರು ಮಾತನಾಡಿ ಸ್ವಾತಂತ್ರ ಚಳುವಳಿಯಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಅತ್ಯಂತ ಸ್ಪಷ್ಟ ರೂಪವನ್ನು ತಾಳಿತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಚಾಮರಾಜನಗರದಿಂದ ಹಿಡಿದು ದೇಶದ ಮೂಲೆ ಮೂಲೆಯಲ್ಲೂ ಸ್ವಾತಂತ್ರ್ಯಕ್ಕಾಗಿ ಚಳುವಳಿಯನ್ನು ಮಾಡಿ ಜೈಲುವಾಸ ಮತ್ತು ಕಠಿಣ ಶಿಕ್ಷೆ ಹಾಗೂ ಸಾವಿರಾರು ಜನ ತಮ್ಮ ಪ್ರಾಣವನ್ನು ಅರ್ಪಿಸಿದರು. ಚಾಮರಾಜನಗರದ ಶ್ರೀ ರಂಗಸ್ವಾಮಿ ಸಹಿತ ಅನೇಕ ಹೋರಾಟಗಾರರು ಬಂಧನಕ್ಕೆ ಒಳಗಾಗಿದ್ದರು. ಶ್ರೀ ರಂಗಸ್ವಾಮಿ ಅವರ ನೆನಪಿನ ಮೂಲಕ ಹಲವು ಸಮಾಜ ಸೇವಕರಿಗೆ ಗೌರವಿಸಿ ಸ್ಪೂರ್ತಿಯನ್ನು ತುಂಬುವ ಕಾರ್ಯಕ್ರಮ ಸಂತೋಷವನ್ನು ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಸಂಸ್ಕೃತಿ ಚಿಂತಕ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪ್ರತಿಯೊಬ್ಬರು ಖಾದಿಯನ್ನು ಧರಿಸುವ ಬಗ್ಗೆ ಸಂಕಲ್ಪವನ್ನು ತೊಡಬೇಕು. ಖಾದಿ ರಾಷ್ಟ್ರೀಯ ಸಂಪತ್ತು .ಹೆಮ್ಮೆಯ ಮತ್ತು ಗೌರವದ ಪ್ರತೀಕವಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾದಿ ಉತ್ಪನ್ನಗಳಿಗೆ ವಿಶೇಷವಾದ ಜಾಗೃತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಯುವಕರು ಹಾಗೂ ವಿದ್ಯಾರ್ಥಿಗಳು ಖಾದಿ ಧಾರಣೆಯ ಮೂಲಕ ದೇಶಿಯ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಹಾಗೂ ನೇಕಾರಿಕೆ ಉದ್ಯಮವನ್ನು ವಿಶೇಷವಾಗಿ ಬೆಳೆಸುವ ಮೂಲಕ ರಾಷ್ಟ್ರದ ಶಕ್ತಿಯಾಗಿ ರೈತರಿಗೆ ಸಹಕಾರವನ್ನು ನೀಡಬಹುದು.
ಪ್ರತಿಯೊಬ್ಬರಲ್ಲೂ ದೇಶಿಯ ಉತ್ಪನ್ನಗಳನ್ನು ಬಳಸುವ ಬಗ್ಗೆ ಅರಿವಿನ ಜಾಗೃತಿಯ ಆಗಬೇಕು. ಇದಕ್ಕೆ ಸ್ವಾತಂತ್ರ್ಯ ಚಳುವಳಿ ನಮಗೆ ವಿಶೇಷ ಸ್ಪೂರ್ತಿಯನ್ನು ನೀಡುತ್ತದೆ. ಬಾಲಗಂಗಾಧರ ತಿಲಕ್ ರವರು ಸ್ವದೇಶಿ ಜಾಗೃತಿಯ ಮೂಲಕ ಸ್ವಾತಂತ್ರ್ಯ ಚಳುವಳಿಗೆ ತೀವ್ರತೆಯನ್ನು ತಂದರು. ಸ್ವದೇಶಿ ಉತ್ಪನ್ನದ ಬಳಕೆ ಮತ್ತು ಅಭಿಮಾನ ಹಾಗೂ ಆಧುನಿಕತೆಯ ಮೂಲಕ ಯುವ ಜನಾಂಗವನ್ನು ಸ್ವದೇಶಿಯ ಉತ್ಪನ್ನಗಳು ಚಳೆಯುವ ತಂತ್ರಗಳನ್ನು ಬೆಳೆಸಬೇಕು ಎಂದು ತಿಳಿಸಿ ರಂಗಸ್ವಾಮಿ ಅಂತಹ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಗೌರವ ಸಲ್ಲಿಸುವ ಜವಾಬ್ದಾರಿ ನಾಗರೀಕ ಸಮಾಜದ್ದು ಎಂದು ತಿಳಿಸಿದರು.
ಸ್ವಾತಂತ್ರ ಹೋರಾಟಗಾರರಾದ ಶ್ರೀರಂಗಸ್ವಾಮಿಯವರ ಪುತ್ರ ಕನ್ನಡ ಚಳುವಳಿಗಾರ, ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ರಾಜ್ಯ ಅಧ್ಯಕ್ಷ ಚಾರಂ ಶ್ರೀನಿವಾಸ್ ಗೌಡ ಮಾತನಾಡಿ ಕಳೆದ 12 ವರ್ಷಗಳಿಂದ ನಮ್ಮ ತಂದೆಯವರಾದ ರಂಗಸ್ವಾಮಿಯವರ ಸ್ಮರಣಾರ್ಥ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಸಮಾಜಕ್ಕೆ ಸೇವೆ ಸಲ್ಲಿಸಿರುವ ಅನೇಕ ಪ್ರತಿಭಾನ್ವಿತರನ್ನು ಗೌರವಿಸುವ ಮೂಲಕ ಪ್ರತಿಯೊಬ್ಬರು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳುವ ದಿಕ್ಕಿನಲ್ಲಿ ಸ್ಪೂರ್ತಿ ತುಂಬುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. ಎಂಟು ತಿಂಗಳಗಳ ಕಾಲ ಬೆಂಗಳೂರಿನ ಸೆಂಟ್ರಲ್ ಜೈಲೀನಲ್ಲಿ ಬಂಧನಕ್ಕೆ ಒಳಗಾಗಿ, ತೀವ್ರ ಶಿಕ್ಷೆಯನ್ನು ಅನುಭವಿಸಿದ ರಂಗಸ್ವಾಮಿ ಅಂತಹ ನೂರಾರು ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಯುವ ಪೀಳಿಗೆಗೆ ಪರಿಚಯವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶೈಲ ಕುಮಾರ್ ಮಾತನಾಡಿ ಸ್ವಾತಂತ್ರ್ಯ ಚಳುವಳಿಯ ಹೋರಾಟ ಅಹಿಂಸೆ ಮತ್ತು ಹಿಂಸಾತ್ಮಕ ಎರಡು ರೂಪದ ಹೋರಾಟವಾಗಿದೆ. ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟವನ್ನು ನಡೆಸಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಜನಸಾಮಾನ್ಯರ ಚಳುವಳಿಯಾಗಿ ರೂಪುಗೊಂಡು ಬ್ರಿಟಿಷರು ಭಾರತ ಬಿಡುವ ಚಳುವಳಿಯಾಗಿ ರೂಪುಗೊಂಡಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷರಾದ ಸುರೇಶ್ ರಾಮ ಸಮುದ್ರ ವಯಸ್ಸಿ ಮಾತನಾಡಿ ಚಾಮರಾಜನಗರ ಜಿಲ್ಲೆ ಹೋರಾಟಗಾರರ ತವರು ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲೂ ವಿಶೇಷವಾಗಿ ಚಳುವಳಿಗಾರರ ಪ್ರಭಾವ ಇತ್ತು. ಇಂದಿಗೂ ಪ್ರತಿದಿನ ಕನ್ನಡ ಹೋರಾಟ ರೈತ ಸಂಘದ ಹೋರಾಟಗಳು ನಿರಂತರವಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಹೋರಾಟಗಳು ಅನೇಕ ಸಮಸ್ಯೆಗಳ ಪ್ರತಿರೂಪವಾಗಿದೆ. ಹೋರಾಟಗಾರರಿಗೆ ಗೌರವಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ಗಿರ್ಗಿ, ಶಿಕ್ಷಕಿ ಸುಶೀಲ, ವೃದ್ಧಾಶ್ರಮದ ಸೇವೆ ಸಲ್ಲಿಸುತ್ತಿರುವ ಶಿವ ಸ್ವಾಮಿ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಹಿರಿಯರಾದ ಗಣೇಶ್ ದೀಕ್ಷಿತ್, ಕನ್ನಡ ಹೋರಾಟಗಾರ ರಾಜಗೋಪಾಲ್, ಶ್ರೀನಿಧಿ ಕುದರ್ , ಪನ್ಯದಹುಂಡಿ ರಾಜು, ಅರುಣ್ ಗೌಡ, ಜಮುನಾ, ಪ್ರಿಯಾಂಕ ಗೌಡ, ಸಿದ್ದರಾಜು, ಸುರೇಶ್ ಗೌಡ ,ಪದ್ಮ ಪುರುಷೋತ್ತಮ, ಪದ್ಮಾಕ್ಷಿ ,ಶಿವಣ್ಣ ತಾಂಡವಮೂರ್ತಿ, ಮುತ್ತಿಗೆ ಗೋವಿಂದರಾಜು, ಬಿಕೆ ಆರಾಧ್ಯ ಸುರೇಶ್ ಗೌಡ, ಲಿಂಗರಾಜು ರಾಜಪ್ಪ ಇದ್ದರು.