ಬಿಹಾರ: ಧರ್ಮಸ್ಥಳ ಪ್ರಕರಣ ಕುರಿತು ಬಿಜೆಪಿಯವರಿಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬಿಹಾರದದಲ್ಲಿ ಪಕ್ಷದ ಮುಖಂಡ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ʼಮತ ಅಧಿಕಾರ ಯಾತ್ರೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಪ್ರಕರಣ ಕುರಿತು ನಾನು ಈಗಾಗಲೇ ಹತ್ತಾರು ಬಾರಿ ಮಾತನಾಡಿದ್ದೇನೆ. ಧರ್ಮಸ್ಥಳ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವರು ಬಾಯಿ ಮುಚ್ಚಿಕೊಂಡು ಇದ್ದರೆ ಅವರಿಗೆ ಕ್ಷೇಮ. ಬಿಜೆಪಿಯಲ್ಲಿ ಎರಡು ಬಣಗಳಿದ್ದು, ಅಸ್ತಿತ್ವ ಉಳಿಸಿಕೊಳ್ಳಲು ಧರ್ಮಸ್ಥಳ ಕುರಿತು ಮಾತನಾಡುತ್ತಿದ್ದಾರೆ. ಬಿಜೆಪಿ ಮುಖಂಡರು ತಮ್ಮ ವೈಫಲ್ಯಗಳನ್ನು ನಮ್ಮ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಾವು ಸತ್ಯಾಂಶವನ್ನು ಜನರ ಮುಂದಿಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಈ ಯಾತ್ರೆ ದೇಶದ ಪಾಲಿನ ಗೇಮ್ ಚೇಂಜರ್ ಎಂದು ಬಣ್ಣಿಸಿದರು. ರಾಹುಲ್ ಗಾಂಧಿ ಅವರು ಕರ್ನಾಟಕ, ಮಹಾರಾಷ್ಟ್ರ ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದಿರುವ ಮತ ಕಳವು ಕುರಿತು ಇಡೀ ದೇಶವೇ ಚರ್ಚೆ ನಡೆಸುತ್ತಿದೆ. ರಾಹುಲ್ ಗಾಂಧಿ ಅವರು ಸಂವಿಧಾನದತ್ತವಾಗಿ ದೇಶದ ಜನಸಾಮಾನ್ಯರಿಗೆ ಸಿಕ್ಕಿರುವ ಹಕ್ಕಿನ ರಕ್ಷಣೆಗೆ ಹೋರಾಡುತ್ತಿದ್ದಾರೆ ಎಂದರು.
ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಮಹಾಘಟಬಂಧನ ಕುರಿತು ಒಲವು ತೋರಿಸುತ್ತಿದ್ದಾರೆ. ವಿಶೇಷವಾಗಿ ಯುವಕರು ಬೀದಿಗಿಳಿದು ರಾಹುಲ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಮಹಾಘಟಬಂಧನ ನೀಡಿರುವ ಗ್ಯಾರಂಟಿಗಳು ಜನರಿಗೆ ನೆರವಾಗಲಿದ್ದು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಲ್ಲಾ ರಾಜ್ಯಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪ ಅಂತರದಲ್ಲಿ ಅಧಿಕೃ ಕಳೆದುಕೊಂಡಿತ್ತು. ಈ ಬಾರಿ ಬಿಹಾರದಲ್ಲಿ ಅಧಿಕಾರ ರಚಿಸುವ ವಿಶ್ವಾಸ ಇದೆ ಎಂದರು.