ಬೆಂಗಳೂರು : ರಾಜ್ಯದೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಖರೀದಿ ಭರಾಟೆ ಜೋರಿದೆ. ಪ್ರಮುಖವಾಗಿ ಬೆಂಗಳೂರಿನ ಮಾರ್ಕೆಟ್ ನಲ್ಲಿ ಬೆಲೆ ಗಗನಕ್ಕೇರಿದೆ.
ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾರ್ಕೆಟ್‌ನಲ್ಲಿ ಜೋರಾಗಿದೆ. ಮಾರ್ಕೆಟ್ ನಲ್ಲಿ ಸಿಕ್ಕಾಪಟ್ಟೆ ರಷ್ ಇದೆ. ಹಬ್ಬದ ಸಾಮಾಗ್ರಿಕೊಳ್ಳಲು ಜನರು ಮುಗಿಬಿದ್ದಿದ್ದು, ಮಂಗಳವಾರ ಇವತ್ತು ಸಹ ಗಿಜುಗುಡುತ್ತಿದೆ.
ವರಮಹಾಲಕ್ಷ್ಮಿ ಹಬ್ಬದ ನಂತರ ಬರುವ ದೊಡ್ಡ ಹಬ್ಬ ಗೌರಿ – ಗಣೇಶ ಹಬ್ಬ. ಗೌರಿ ಗಣೇಶ ಹಬ್ಬವನ್ನ ಇಡೀ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಹಣ್ಣುಗಳ ಬೆಲೆ ಅಷ್ಟಾಗಿ ಏರಿಕೆ ಕಂಡಿಲ್ಲ. ಆದ್ರೆ ಹೂವುಗಳ ಬೆಲೆ ಮಳೆ ಹಾಗೂ ಹಬ್ಬದಿಂದ ವಿಪರೀತ ಗಗನಕ್ಕೇರಿದೆ.
ಯಾವ ಹೂವು ಎಷ್ಟು ಬೆಲೆ..?
ಹಬ್ಬದ ಸಡಗರದ ಮಧ್ಯೆ ಪುಷ್ಪಗಳು ದುಬಾರಿ ಆಗಿದೆ.
ಕನಕಾಂಬರ-3,000-4,000 ರೂ.
ಮಲ್ಲಿಗೆ-1,200-1,600 ರೂ.
ಸೇವಂತಿ-500-600 ರೂ.
ಗುಲಾಬಿ-600-800 ರೂ. ನಷ್ಟು ರೇಟ್ ಇವೆ.

ಗಣೇಶ ಚತುರ್ಥಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಸಾಕಷ್ಟು ಗ್ರಾಹಕರು ಮಾರುಕಟ್ಟೆಗೆ ಧಾವಿಸಿದ್ದಾರೆ. ಇದರಿಂದ ಮಾರ್ಕೆಟ್ ಸುತ್ತಲಿನ ರಸ್ತೆಗಳಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಆಗಿದೆ. ಇದರಿಂದ ಚಾಲಕರು, ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಬಿಎಂಟಿಸಿ ಬಸ್ ಅಂತೂ ಮಾರ್ಕೆಟ್ಗೆ ಹೋಗದೇ ಒಂದು ಸ್ಟಾಪ್ ಹಿಂದೆಯೇ ಪ್ರಯಾಣಿಕರನ್ನು ಇಳಿಸಿ ವಾಪಸ್ ಹೋಗುತ್ತಿವೆ
ಗೌರಿ ಹಬ್ಬವು ಪಾರ್ವತಿ ದೇವಿಗೆ ಸಮರ್ಪಿತವಾದ ಹಬ್ಬವಾಗಿದ್ದು, ಈ ದಿನದಂದು ಪಾರ್ವತಿ ದೇವಿಯನ್ನು ಗೌರಿಯಾಗಿ ಪೂಜಿಸಲಾಗುತ್ತದೆ. ಗೌರಿ ಹಬ್ಬವನ್ನು ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಹೆಣ್ಣುಮಕ್ಕಳು ಬಾಗಿನ ಕೊಡೋದು ಈ ಹಬ್ಬದ ಸಂಪ್ರದಾಯವಾಗಿದೆ.
ನಾಡಿನೆಲ್ಲೆಡೆ ಗೌರಿ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ಒಂದು ದಿನ ಮುಂಗಡವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಪಾರ್ವತಿ ದೇವಿಯ ಅವತಾರವಾದ ಗೌರಿ ದೇವಿಯನ್ನು ಇಂದು ಮನೆಗೆ ಬರಮಾಡಿಕೊಂಡು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಕರ್ನಾಟಕ ಸೇರಿದಂತೆ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯೂ ಭಾರೀ ವಿಜ್ರಂಭಣೆಯಿಂದ ಮಾಡಲಾಗುತ್ತದೆ.
ಇನ್ನು ಈ ದಿನದಂದು ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಹಿಳೆಯರು ಸ್ವರ್ಣಗೌರಿ ವ್ರತವನ್ನು ಮಾಡುತ್ತಾರೆ. ಈ ದಿನದಂದು ವಿವಾಹಿತ ಮಹಿಳೆಯರು, ಗಂಡನ ಮನೆಯಲ್ಲಿ ಪೂಜೆ ನೆರವೇರಿಸಿ ತವರು ಮನೆಗೆ ಬಂದು, ಅಲ್ಲಿ ನಡೆಯುವ ಗೌರಿ ಪೂಜೆಯಲ್ಲಿ ಭಾಗಿಯಾಗಿ ಆಶೀರ್ವಾದ ಪಡೆದು, ಬಾಗಿನ ಸ್ವೀಕರಿಸುತ್ತಾಳೆ
ಭಾದ್ರಪದ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಇಂದು ಅಂದ್ರೆ ಆಗಸ್ಟ್ 26ರ ಮಂಗಳವಾರದಂದು ಗೌರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಅವಿವಾಹಿತ ಹುಡುಗಿಯರು ಉತ್ತಮ ಪತಿಯನ್ನು ಪಡೆಯುವುದಕ್ಕಾಗಿ ಗೌರಿ ಹಬ್ಬವನ್ನು ಆಚರಿಸುತ್ತಾರೆ.