ಮೈಸೂರು : ವಿಧಾನಸಭೆ ಅಧಿವೇಶನದಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಮಾತನಾಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ದಲಿತ ವಿರೋಧಿಯಲ್ಲ ಎಂದು ಜೆಡಿಎಸ್ನ ಹಿರಿಯ ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭಾ ಕಲಾಪದಲ್ಲಿ ಜಿಟಿಡಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತು ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮೈಸೂರಿನಲ್ಲಿ ಜಿ ಟಿ ದೇವೇಗೌಡ ಸ್ಪಷ್ಟನೆ ನೀಡಿದರು. ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸರ್ಕಾರದ ಪಾಲುಗಾರಿಕೆ ಇರುವ ಸಂಘಗಳಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ ಹಾಗೂ ಒಬ್ಬ ಹಿಂದುಳಿದ ವರ್ಗದವರಿಗೂ ಸ್ಥಾನಮಾನ ನೀಡಿ ಎಂದು ಕಲಾಪದಲ್ಲಿ ವಿನಂತಿಸಿದ್ದೇನೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಲವರು ಟೀಕೆಗಾಗಿ ಕೆಟ್ಟ ಪದಗಳನ್ನು ಬಳಸಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಸಹಕಾರ ಸಂಘಗಳಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ವಿಧಾನಸಭೆಯಲ್ಲಿ ಮಾತನಾಡಲಾಗಿತ್ತು. ಅದನ್ನು, ದಲಿತ ವಿರೋಧಿ ಎಂದು ಬಿಂಬಿಸಲಾಗಿದೆ. ಆದರೆ, ದಲಿತ ವಿರೋಧಿಯಲ್ಲ. ಸಹಕಾರ ಕ್ಷೇತ್ರದಲ್ಲಿ 1970 ರಿಂದಲೂ ಕೆಲಸ ಮಾಡಿದ್ದೇನೆ. ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ’ ಎಂದು ಮೈಸೂರಿನಲ್ಲಿ ಜಿಟಿ ದೇವೇಗೌಡ ಹೇಳಿದ್ದಾರೆ.
‘ರಾಜಕೀಯ ಜೀವನದಲ್ಲಿ ನನ್ನ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಈ ವಿಚಾರವಾಗಿ ದಾಖಲಾದರೂ, ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡುವರ ವಿರುದ್ಧ ದೂರು ನೀಡುವುದಿಲ್ಲ. ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ’ ಎಂದಿದ್ದಾರೆ.
ನಾನು ಸರ್ಕಾರದ ಹಸ್ತಕ್ಷೇಪ ಪ್ರಶ್ನಿಸಿದ್ದೆ: ‘ನಾನು ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿದ್ದೇನೆ. ವಿಧಾನಸಭೆ ಅಧಿವೇಶನದಲ್ಲಿ ನಾನು ಹೇಳಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಸರ್ಕಾರದ ಹಸ್ತಕ್ಷೇಪ ಸಹಕಾರ ಕ್ಷೇತ್ರದಲ್ಲಿ ಹೆಚ್ಚಾಗಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’.
‘ನಾನು ದಲಿತ ವಿರೋಧಿಯಲ್ಲ. ಸಹಕಾರ ಸಂಘಗಳಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಈ ರೀತಿ ಮಾಡುವ ಬದಲು ಸಹಕಾರ ಕ್ಷೇತ್ರವನ್ನು ಮುಚ್ಚಿಬಿಡಿ’ ಎಂದು ಹೇಳಿದ್ದೆ. ‘ದಲಿತರು ಬಂದರೆ ಮುಚ್ಚಬೇಕಾ’ ಅಂತ ಶಿವರಾಜ್ ತಂಗಡಗಿ ಹೇಳಿದ್ರು.
‘ನಾನು ನಮ್ಮ ತಂದೆ ಈ ಹಿಂದೆ ದಲಿತರಿಗೆ ಒಂದು ಊರನ್ನೇ ಕಟ್ಟಿಕೊಟ್ಟಿದ್ದೇವೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿಸಿದ್ದೇನೆ. ನಾನು ಯಾವತ್ತೂ ಜಾತಿ ಮಾಡಿಲ್ಲ. ದಲಿತರನ್ನು ಅಗೌರವದಿಂದ ಕಂಡಿಲ್ಲ. ಆಡಳಿತ ಪಕ್ಷ ತಂದಿದ್ದ ಕಾಯ್ದೆಯನ್ನು ವಿರೋಧ ಮಾಡಿದ್ದೇನೆ. ಅದನ್ನೇ ದಲಿತರ ವಿರೋಧಿ ಎಂಬ ರೀತಿ ಬಿಂಬಿಸಿದ್ದಾರೆ’ ಎಂದು ಜಿ.ಟಿ ದೇವೇಗೌಡ ಹೇಳಿದ್ದಾರೆ.
ಬಾನು ಮುಷ್ತಾಕ್ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಟಿಡಿ, ‘ಪ್ರತೀ ವರ್ಷವೂ ದಸರಾವನ್ನು ಸಾಹಿತಿ, ಮಠಾಧೀಶರು, ಹಿರಿಯರಿಂದ ಉದ್ಘಾಟಿಸಲಾಗುತ್ತದೆ. ಹಿಂದೆ ನಿಸಾರ್ ಅಹಮದ್ ಕೂಡ ಉದ್ಘಾಟಿಸಿದ್ದರು. ದಸರಾದ ಉನ್ನತ ಮಟ್ಟದ ಸಮಿತಿಯು ಮುಖ್ಯಮಂತ್ರಿಗಳು ಉದ್ಘಾಟಕರನ್ನು ಆಯ್ಕೆ ಮಾಡಲು ಅನುಮತಿ ನೀಡಿತ್ತು, ಅದಕ್ಕೆ ಸರಿಯಾಗಿ ಆಯ್ಕೆ ಮಾಡಿದ್ದಾರೆ. ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದಿದ್ದರೆ ಉದ್ಘಾಟಕರು ಬರೋದೆ ಇಲ್ವಲ್ಲ’ ಎಂದರು.