ಬೆಂಗಳೂರು: ನಟಿ ರಮ್ಯಾ ರೀತಿಯಲ್ಲೇ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ದೂರು ಸಲ್ಲಿಕೆಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿ ಚೌಧರಿ ಹೇಳಿದ್ದಾರೆ.
ನಟ ದರ್ಶನ್ ರವರ ಧರ್ಮ ಪತ್ನಿಯಾದ ವಿಜಯಲಕ್ಷ್ಮೀ ದರ್ಶನ್ ಹಾಗೂ ಇವರ ಮಗನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡುತ್ತಿರುವುದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣಿನ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತರುವಂತಹ ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಹಾಗೂ ರಕ್ಷಣೆ ಒದಗಿಸುವಂತೆ ಮನವಿ ಮಾಡಲಾಗಿತ್ತು.
ಸುದ್ದಿಗಾರರ ಜೊತೆ ಮಾತನಾಡಿದ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ವಿಜಯಲಕ್ಷ್ಮೀ ದರ್ಶನ್ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಮಾಡಲಾಗಿದೆ. ಈ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ನಟಿ, ಮಾಜಿ ಸಂಸದೆ ರಮ್ಯಾ ಅವರಿಗೆ ಕಿಡಿಗೇಡಿಗಳು ಹೇಗೆ ಅಸಭ್ಯ ಸಂದೇಶಗಳನ್ನು ರವಾನಿಸಿದ್ದರೋ ಅದೇ ರೀತಿ ವಿಜಯಲಕ್ಷ್ಮೀ ಅವರಿಗೂ ಅಸಭ್ಯವಾಗಿ, ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಮಾಜಿ ಸಂಸದೆ ರಮ್ಯಾ, ವಿಜಯಲಕ್ಷ್ಮೀ ದರ್ಶನ್ ಅಂತಾ ಅಲ್ಲ, ಯಾವುದೇ ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ಕಮೆಂಟ್ ಮಾಡಿದರೆ, ಅವಹೇಳನ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅವಹೇಳನ ಮಾಡಿದರೆ ಜೈಲುಶಿಕ್ಷೆ ಜೊತೆಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.