ಕನಕಪುರ: ನಗರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅಪೂರ್ಣಗೊಂಡಿವೆ, ಜನರು ಪರದಾಡುತ್ತಿದ್ದಾರೆ, ಗುತ್ತಿಗೆದಾರನ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದು ನಗರಸಭೆಯಲ್ಲಿ ಗುರುವಾರ ನಡೆಯಿತು.
ನಗರಸಭೆ ಅಧ್ಯಕ್ಷೆ ಹೇಮರಾಜು ಅವರ ಅಧ್ಯಕ್ಷತೆಯಲ್ಲಿ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ ನಗರದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಯು ಪೂರ್ಣಗೊಳ್ಳದೆ ಜನರು ಸಮಸ್ಯೆ ಪಡುತ್ತಿರುವುದರ ಕುರಿತು ಚರ್ಚೆ ನಡೆಸಿದರು.
ನಗರದ ಎಲ್ಲಾ ರಸ್ತೆಗಳ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡಿರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ, ರಸ್ತೆಗಳನ್ನು ಒಗೆದು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ ಜನರು ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ಎಂದು ಸದಸ್ಯರು ಅಧ್ಯಕ್ಷರ ಗಮನಕ್ಕೆ ತಂದರು.
ಸಭೆಗೆ ಗುತ್ತಿಗೆದಾರನನ್ನು ಕರೆಸಿ, ಅವರು ತ್ವರಿತವಾಗಿ ಕೆಲಸ ಮುಗಿಸುತ್ತಾರೋ ಇಲ್ಲವೋ ಕೇಳಿ, ಕಾಮಗಾರಿ ಗುತ್ತಿಗೆಯ ನಿಯಮದಂತೆ ಮೂರು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು, ಆರು ತಿಂಗಳಾದರೂ ಪೂರ್ಣಗೊಳಿಸಿಲ್ಲ ಅವರ ಟೆಂಡರ್ ಅನ್ನು ವಜಗೊಳಿಸಿ, ಬೇರೆಯವರಿಗೆ ಟೆಂಡರ್ ನೀಡಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಗರದಲ್ಲಿ ನಡೆಸುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯು ತುಂಬಾ ವಿಳಂಬವಾಗಿದ್ದು, ಜನರ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಬೇಕು, ಜೊತೆಗೆ ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ರಸ್ತೆಯನ್ನು ಕಲ್ಪಿಸಬೇಕೆಂದು ಸದಸ್ಯರು ಒತ್ತಾಯಿಸಿದರು.
ನಗರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ವೇಳೆ ರಸ್ತೆ ವಿಭಜಕದ ಮಧ್ಯೆ ಅಳವಡಿಸಿರುವ ವಿದ್ಯುತ್ ದೀಪದ ಕೇಬಲ್ ಹಾಳಾಗಿದೆ, ಅದರಿಂದ ನಗರದಲ್ಲಿ ವಿದ್ಯುತ್ ದೀಪಗಳಿಲ್ಲದಂತಾಗಿದೆ ಅದನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಬೇಕೆಂದು ಸದಸ್ಯರು ಪೌರಾಯುಕ್ತರಿಗೆ ಹೇಳಿದರು.
ನೂತನ ಬೀದಿ ದೀಪಗಳ ಅಳವಡಿಕೆ ಮಾಡುತ್ತಿರುವ ಗುತ್ತಿಗೆದಾರನು ಕೆಲವು ಎಲ್ಇಡಿ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿಲ್ಲ, ದೀಪಗಳನ್ನು ಬದಲಾಯಿಸುವುದಾದರೆ ಎಲ್ಲಾ ಕಡೆ ಬದಲಾಯಿಸಿ ಕೊಡಿ, ಅರ್ಧಂಬರ್ಧ ಕೆಲಸ ಮಾಡಿದರೆ ಸಾರ್ವಜನಿಕರಿಗೆ ನಾವು ಉತ್ತರ ಕೊಡಲು ಆಗುತ್ತಿಲ್ಲ ಎಂದು ಸದಸ್ಯರು ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ತಿಳಿಸಿದರು.
ಸಭೆಯಲ್ಲಿ 45 ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆಯನ್ನು ನಡೆಸಲಾಯಿತು, ನಗರಸಭೆಯಿಂದ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಹರಾಜಾಗದೆ ಬಾಕಿ ಉಳಿದಿವೆ. ಅದರ ಬಾಡಿಗೆ ಮತ್ತು ಮುಂಗಡ ಹಣವನ್ನು ಪರಿಷ್ಕರಿಸಬೇಕಿದೆ ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು.
ಸದಸ್ಯರು ಬಾಕಿ ಉಳಿದಿರುವ ಅಂಗಡಿಗಳ ಬಾಡಿಗೆಯನ್ನು ಪ್ರಸ್ತುತ ಸಂದರ್ಭದಲ್ಲಿ ಪರಿಷ್ಕರಣೆ ಮಾಡಿ ಮಳಿಗೆಗಳನ್ನು ಮತ್ತೊಮ್ಮೆ ಮರು ಹರಾಜು ಮಾಡುವಂತೆ ಸಲಹೆ ನೀಡಿದರು. ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಮುಂಗಡ ಹಣದ ಪರಿಷ್ಕರಣೆ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಶೀಘ್ರವಾಗಿ ಸಭೆ ಕರೆದು ಸಭೆ ನಡೆಸಬೇಕೆಂದು ಸದಸ್ಯರು ಆಯುಕ್ತರಿಗೆ ತಿಳಿಸಿದರು.
ನಗರಸಭೆಯ ಇಂಜಿನಿಯರ್ ಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ. ಕಾಮಗಾರಿ ಚಾಲನೆ ನೀಡಲು ಗುದ್ದಲಿ ಪೂಜೆ ಮಾಡುವಾಗ ಬರುವುದನ್ನು ಬಿಟ್ಟರೆ ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು. ಪೌರಾಯುಕ್ತ ಎಂ.ಎಸ್.ಮಹದೇವ್ ಮಾತನಾಡಿ ಸಂಬಂಧಪಟ್ಟ ಗುತ್ತಿಗೆದಾರ ಅವರನ್ನು ಕರೆಸಿ, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗುವುದು, ಒಂದು ವೇಳೆ ನಿಗಧಿತ ಸಮಯಕ್ಕೆ ಪೂರ್ಣಗೊಳಿಸದಿದ್ದರೆ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುವುದು ತಿಳಿಸಿದರು.
ನಗರ ಸಭೆಯ ಇಂಜಿನಿಯರ್ ಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡಸಬೇಕು ಹಾಗೂ ಆ ವೇಳೆ ನಗರಸಭಾ ಸದಸ್ಯರ ಗಮನಕ್ಕೆ ತರಬೇಕು, ಅವರನ್ನು ಕರೆದು ಸ್ಥಳ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು. ನಗರಸಭೆ ಅಧ್ಯಕ್ಷೆ ಹೇಮರಾಜು ಮಾತನಾಡಿ ಗುತ್ತಿಗೆದಾರರನ್ನು ಮುಂದಿನ ಸಭೆಗೆ ಬರುವಂತೆ ತಿಳಿಸಿದ್ದೇನೆ, ಖುದ್ದು ಅವರ ಜೊತೆ ಸದಸ್ಯರ ಸಮ್ಮುಖದಲ್ಲಿ ಕಾಮಗಾರಿಗಳ ಸಂಬಂಧ ಚರ್ಚೆ ನಡೆಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗುವುದು, ಇಲ್ಲವಾದಲ್ಲಿ ಅವರ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ನೀಡಲು ಸೂಚಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಉಪಾಧ್ಯಕ್ಷ ಸಯ್ಯದ್ ಸಾಧಿಕ್, ನಗರಸಭೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಲಕ್ಷ್ಮಿದೇವಮ್ಮ, ವೆಂಕಟೇಶ್ ಕಾಂತರಾಜು, ಮೋಹನ್, ಕೋಟೆ ಕಿರಣ್, ಜಯರಾಮು, ಸ್ಟುಡಿಯೋ ಚಂದ್ರು, ನಾಗರಾಜು, ವಿಜಯ್‌ಕುಮಾರ್, ಲೋಕೇಶ್ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.