ವರದಿ: ಸ್ಟೀಫನ್ ಜೇಮ್ಸ್, ಬೆಳಗಾವಿ
ಬೆಳಗಾವಿ: ಬೆಳಗಾವಿಯಿಂದ ವಿಜಯಪುರದತ್ತ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದ ಸವಾರ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಸ್ಥಳದಲ್ಲಿದ್ದ ಅಥಣಿಯ ಮಾಜಿ ಶಾಸಕ ಶಹಜಹಾನ್ ಡೋಂಗರ್ಗಾವ್ ತಕ್ಷಣವೇ ನೆರವಿಗೆ ಧಾವಿಸಿ ಮಾನವೀಯತೆಯ ಮೆರುಗು ತೋರಿದ ಘಟನೆ ಪ್ರದೇಶದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಅರಟಾಳ ಕ್ರಾಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಡಿಸೆಲ್ ಮುಗಿದು ರಸ್ತೆಯ ಮೇಲೆ ನಿಂತಿದ್ದ ಪಿಕಪ್ ವಾಹನಕ್ಕೆ, ವೇಗವಾಗಿ ಬಂದ ಪಲ್ಸರ್ ದ್ವಿಚಕ್ರ ವಾಹನ ಅತಿಯಾಗಿ ಹೊಡೆದ ಪರಿಣಾಮ, ಬೈಕ್ ಸವಾರ ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ವ್ಯಕ್ತಿಯ ಕೈ ಮುರಿದಿದ್ದು, ಕಾಲುಗಳು ಕೂಡ ತೀವ್ರವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿ ನರಳಾಡುತ್ತಿದ್ದ.
ಈ ವೇಳೆ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಮಾಜಿ ಶಾಸಕ ಶಹಜಹಾನ್ ಡೋಂಗರ್ಗಾವ್ ಅವರು ಅಪಘಾತದ ದೃಶ್ಯ ಕಂಡು ತಕ್ಷಣವೇ ತಮ್ಮ ವಾಹನ ನಿಲ್ಲಿಸಿದರು. ಗಾಯಗೊಂಡ ಯುವಕ ತನ್ನ ಕೈ ಎತ್ತಿ ಸಹಾಯ ಕೋರಿದಾಗ, ಶಾಸಕರು ಆತನ ಕೈ ಹಿಡಿದು ಧೈರ್ಯ ತುಂಬಿಸಿದರು ಮತ್ತು ತಕ್ಷಣವೇ ಸ್ಥಳೀಯರಿಗೆ, ಅಧಿಕಾರಿಗಳಿಗೆ ಮಾಹಿತಿಯನ್ನೊದಗಿಸಿದರು.
ಶಾಸಕರು ಕೂಡಲೇ 108 ಅಂಬುಲೆನ್ಸ್ ಹಾಗೂ ಹಾವೇ ಪೆಟ್ರೋಲಿಂಗ್ ತಂಡಕ್ಕೆ ಕರೆ ಮಾಡಿದ್ದು, ಗಾಯಾಳುವನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಿಸಿದರು. ಅಂಬುಲೆನ್ಸ್ ಬರುವವರೆಗೆ ಅವರು ಸ್ಥಳದಲ್ಲಿಯೇ ಇದ್ದು, ಗಾಯಾಳುವನ್ನು ವಾಹನಕ್ಕೆ ಹತ್ತಿಸಲು ಸಹ ಸಹಾಯ ಮಾಡಿ ಆಸ್ಪತ್ರೆಗೆ ಕಳುಹಿಸಿದರು.
ಇಡೀ ಘಟನೆಗೆ ಸಾಕ್ಷಿಯಾದ ಸ್ಥಳೀಯರು ಮಾಜಿ ಶಾಸಕರ ಮಾನವೀಯ ನಡೆಗೆ ಅಭಿನಂದನೆ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಯಾಗಿ ಅವರು ತೋರಿದ ದಯೆ, ಕಾಳಜಿ ಮಾದರಿಯಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಘಟನೆಯು ವ್ಯಾಪಕವಾಗಿ ಹರಡುತ್ತಿದ್ದು, ಹಲವು ಜನರು ಧನ್ಯವಾದ ಮತ್ತು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಈ ಅಪಘಾತದಿಂದಾಗಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರೂ, ಪೊಲೀಸರು ಸ್ಥಳಕ್ಕೆ ತಲುಪಿದ ಬಳಿಕ ಪರಿಸ್ಥಿತಿ ನಿಯಂತ್ರಣದಲ್ಲಿ ಬಂದಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಹಾಗೂ ಪಲ್ಸರ್ ವಾಹನ ಚಾಲಕನ ಗುರುತು ಪತ್ತೆ ಮಾಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.