ಯಳಂದೂರು: ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಒಂದು ತಿಂಗಳ ಅಂತರದಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕ ದಂಪತಿಯನ್ನು ಒಂದೇ ವೇದಿಕೆಯಲ್ಲಿ ಅಭಿನಂದಿಸಿದ ಅಪರೂಪದ ಕಾರ್ಯಕ್ರಮ ಪಟ್ಟಣದ ಬಳೇಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಈಚೆಗೆ ನೆರವೇರಿತು.
ಇದೇ ಶಾಲೆಯ ಶಿಕ್ಷಕರಾಗಿದ್ದ ಅನ್ವರ್‌ಪಾಶ ಹಾಗೂ ಎನ್. ಜರೀನಾಬಾನು ದಂಪತಿಯನ್ನು ಆತ್ಮೀಯವಾಗಿ ಬೀಳ್ಕೂಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮ್ಮನಪುರ ಮಹೇಶ್ ಮಾತನಾಡಿ, ಶಿಕ್ಷಕ ಸೇವಾವೃತ್ತಿಯನ್ನು ಆರಂಭಿಸಿದ ಅನ್ವರ್‌ಪಾಶ ೩೧ ವರ್ಷಗಳ ಕಾಲ ಹಾಗೂ ಇವರ ಪತ್ನಿ ಎನ್. ಜರೀನಾಬಾನು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದರು.
ಪಟ್ಟಣದ ಬಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನ್ವರ್ ಪಾಶ ೧೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕೊಮಾರನಪುರ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕರಾಗಿ ೩ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ಪತ್ನಿ ಎನ್. ಜರೀನಾಬಾನು ೩೦ ವರ್ಷಗಳ ತಮ್ಮ ಶಿಕ್ಷಕ ವೃತ್ತಿಯಲ್ಲಿ ೧೭ ವರ್ಷಗಳ ಸುದೀರ್ಘ ಕಾಲ ಬಳೇಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯಲ್ಲಿ ಓದಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಇವರಿಬ್ಬರೂ ಆದರ್ಶ ದಂಪತಿಯಾಗಿದ್ದು ತಮ್ಮ ವೃತ್ತಿಯ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಸೇವೆಯನ್ನು ಸಲ್ಲಿಸಿದ್ದಾರೆ. ಇಂತಹ ಶಿಕ್ಷಕರು ಇತರರಿಗೂ ಮಾದರಿಯಾಗಲಿ ಎಂದು ಆಶಿಸಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ವೈ.ಎಂ. ಮಂಜುನಾಥ್, ತಾಲೂಕು ಗೌರವಾಧ್ಯಕ್ಷ ಯದುಗಿರಿ, ಕಾರ್ಯದರ್ಶಿ ರವಿಕುಮಾರ್, ಪಪಂ ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮಿ ಸಿಆರ್‌ಪಿ ಶಶಿರೇಖಾ, ಮುಖ್ಯ ಶಿಕ್ಷಕಿ ಸಾವಿತ್ರಮ್ಮ, ಶಿಕಷಕರ ಸಂಘದ ಸೋಮಣ್ಣ, ನಾಗರಾಜು, ನಂಜುಂಡಸ್ವಾಮಿ, ಚಂದ್ರಮ್ಮ, ಸುರೇಶ, ನಂಜಯ್ಯ, ಶಾಂತರಾಜು, ಶಿವಣ್ಣ, ವೈ.ಆರ್. ಗಿರೀಶ್, ದೊಡ್ಡತಾಯಮ್ಮ, ರಾಧ, ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಅನೇಕರು ಇದ್ದರು.