ಬೆಂಗಳೂರು: ಶ್ರವಣಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದಲಿಂಗಯ್ಯವರ ಹೆಸರಿನಲ್ಲಿ ಸ್ಥಾಪಿತವಾಗಿರುವ “ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ” ಪುರಸ್ಕಾರಕ್ಕೆ 2024ನೆಯ ಸಾಲಿಗೆ ಜನಪದ ಗಾಯಕ ಎಚ್.ಜನಾರ್ಧನ್(ಜನ್ನಿ) ಮತ್ತು 2025ನೆಯ ಸಾಲಿಗೆ ಶೂದ್ರ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಡಾ.ಸಿದ್ದಲಿಂಗಯ್ಯನವರ ತಾತ್ವಿಕತೆಯನ್ನು ಸಮರ್ಥವಾಗಿ ವಿವಿಧ ಮಾಧ್ಯಮಗಳ ಮೂಲಕ ಸಮರ್ಥವಾಗಿ ಬಿಂಬಿಸುತ್ತಿರುವ ಸಾಧಕರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ.
2024ನೆಯ ಸಾಲಿನ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ’ ಪುರಸ್ಕಾರಕ್ಕೆ ಪಾತ್ರರಾಗಿರುವ ಎಚ್.ಜನಾರ್ಧನ (ಜನ್ನಿ)ಯವರು ಸುಮಾರು ನಾಲ್ಕೂವರೆ ದಶಕಗಳಿಂದ ರಂಗಭೂಮಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡವರು. ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಅವರು ಬೀದಿ ನಾಟಕ ಚಳುವಳಿಯಲ್ಲಿ, ಕಾವ್ಯರಂಗ ಪ್ರಯೋಗದಲ್ಲಿ ತಮ್ಮ ವಿಶಿಷ್ಟತೆಯನ್ನು ಮರೆದಿದ್ದಾರೆ.’ಬರ’ ಚಿತ್ರದ ಮೂಲಕ ಚಲನಚಿತ್ರ ಕ್ಷೇತ್ರವನ್ನು ಪ್ರವೇಶ ಮಾಡಿ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ಜನಮನದ ಜನ್ನಿ’ ಎಂದೇ ಹೆಸರಾಗಿರುವ ಇವರು ಸಿದ್ದಲಿಂಗಯ್ಯನವರ ಕವಿತೆಗಳನ್ನು ಗಾಯನದ ಮೂಲಕ ಜನಮನಕ್ಕೆ ತಲುಪಿಸಿದ ಸಾಧನೆಯನ್ನು ಗಮನಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
2024ನೆಯ ಸಾಲಿನ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ’ ಪುರಸ್ಕಾರಕ್ಕೆ ಪಾತ್ರರಾಗಿರುವ ಶೂದ್ರ ಶ್ರೀನಿವಾಸ್ ‘ಶೂದ್ರ’ ಸಾಹಿತ್ಯ ಪತ್ರಿಕೆಯ ಮೂಲಕ ಜನಪ್ರಿಯರಾದವರು. ಸಂವೇದನಾಶೀಲ ಬರಹಗಾರರಾದ ಅವರು ನಿರಂತರ ಹೋರಾಟಗಾರರು. ಶೂದ್ರ, ಸಲ್ಲಾಪ, ನೆಲದ ಮಾತು ಪತ್ರಿಕೆಗಳನ್ನು ಪ್ರಕಟಿಸಿದ ಹೆಗ್ಗಳಿಕೆಯ ಅವರು ಕರ್ನಾಟಕದ ಪ್ರಮುಖ ಚಳುವಳಿಗಳ ಜೊತೆಗೆ ಸದಾ ಇದ್ದವರು. ಮಾನವ ಸಂಬಂಧಗಳ ವೃದ್ಧಿಗಾಗಿ ‘ಬೋಧಿವೃಕ್ಷ’ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಹಲವು ಪ್ರಮುಖ ಕಾರ್ಯಕ್ರಮಗಳನ್ನು ನಡೆಸಿದರು. ಲಂಕೇಶ್ ಪತ್ರಿಕೆಯ ಅಂಕಣಕಾರರಾಗಿ ಹೆಸರು ಮಾಡಿರುವ ಅವರು ಡಾ.ಸಿದ್ದಲಿಂಗಯ್ಯನವರ ಮೊದಲ ಕೃತಿ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ನಾಡೋಜ ಡಾ.ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಡಾ.ಸಿದ್ದಲಿಂಗಯ್ಯನವರ ಶ್ರೀಮತಿ ರಮಾಕುಮಾರಿ, ಮಗಳು ಡಾ.ಮಾನಸ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ಪಟೇಲ್ ಪಾಂಡು, ಎಚ್.ಬಿ.ಮದನ ಗೌಡ, ಗೌರವ ಕೋಶಾಧ್ಯಕ್ಷರಾದ ಡಿ.ಆರ್.ವಿಜಯ ಕುಮಾರ್ ಭಾಗವಹಿಸಿದ್ದರು. ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ ಪಾತ್ರರಾಗಿರುವ ಜನಾರ್ಧನ್.ಎಚ್.(ಜನ್ನಿ) ಶೂದ್ರ ಶ್ರೀನಿವಾಸ್ ಅವರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಅವರಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಇನ್ನಷ್ಟು ಕೊಡುಗೆಗಳು ಲಭಿಸಲಿ ಎಂದು ಆಶಿಸಿದ್ದಾರೆ.
ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಶ್ರವಣಬೆಳಗೊಳದ ಶ್ರೀ ಚಾವುಂಡರಾಯ ಸಭಾಂಗಣದಲ್ಲಿ 18-9-2025ರ ಬೆಳಿಗ್ಗೆ 11.30ಕ್ಕೆ ನಡೆಯಲಿದ್ದು ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ್ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಉದ್ಘಾಟನೆಯನ್ನು ಮಾಡಿ ದಿವ್ಯ ಸಾನಿಧ್ಯವನ್ನು ವಹಿಸಲಿದ್ದು, ಶ್ರವಣಬೆಳಗೊಳ ಕ್ಷೇತ್ರದ ಶಾಸಕಾರ ಸಿ.ಎನ್.ಬಾಲಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ.ಸಿದ್ದಲಿಂಗಯ್ಯನವರ ಶ್ರೀಮತಿಯವರಾದ ರಮಾಕುಮಾರಿ ಮತ್ತು ಮಗಳು ಡಾ.ಮಾನಸ ಉಪಸ್ಥಿತರಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದಾರೆ.