ಯಳಂದೂರು: ಕೊಳ್ಳೇಗಾಲದ ಮಹದೇಶ್ವರ ಕಾಲೇಜಿನ ಬಳಿ ನಿರ್ಮಾಣ ಹಂತದಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಮಾಜಿ ಶಾಸಕ ದಿ.ಎಸ್. ಜಯಣ್ಣರವರ ಹೆಸರಿಡಲು ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ವಡಗೆರೆ ಗ್ರಾಮದ ಐಶ್ವರ್ಯ ಫಂಕ್ಷನ್ ಹಾಲ್‌ನಲ್ಲಿ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಎಸ್. ಜಯಣ್ಣರವರ ೭೫ ನೇ ವರ್ಷದ ವಜ್ರಮಹೋತ್ಸವ ಜನ್ಮ ಜಯಂತಿ ಹಾಗೂ ಲೋಕಸಭಾ ಸದಸ್ಯ ಸುನೀಲ್ ಬೋಸ್‌ರವರು ಒಂದು ವರ್ಷ ಪೂರೈಸಿರುವ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್. ಜಯಣ್ಣ ಜನಾನುರಾಗಿಯಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದು ಶಾಸಕನಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದೆ. ನನಗೆ ಕ್ಷೇತ್ರದ ಕಾಂಗ್ರೆಸ್‌ನ ಕಾರ್ಯಕರ್ತರ ಪರಿಚಯ ಮಾಡಿಸಿಕೊಟ್ಟರು. ಆಗ ನನಗೆ ೫೨ ಸಾವಿರ ಮತಗಳು ಬಂದಿತ್ತು. ನಂತರದ ಚುನಾವಣೆಯಲ್ಲಿ ನನಗೆ ೧.೦೮ ಲಕ್ಷ ಮತಗಳು ಬಂದು ನಾನು ಭಾರೀ ಅಂತರದಿಂದ ಗೆದ್ದೆ. ಈ ಗೆಲುವಿನಲ್ಲಿ ಜಯಣ್ಣರವರ ಪಾತ್ರ ಮುಖ್ಯವಾಗಿತ್ತು. ಜಯಣ್ಣ ಇಂದಿನ ಪೀಳಿಗೆಗೆ ಮಾದರಿ ರಾಜಕಾರಣಿಯಾಗಿ ನಿಲ್ಲುತ್ತಾರೆ. ಇವರು ಮೇರು ವ್ಯಕ್ತಿತ್ವವುಳ್ಳ ರಾಜಕಾರಣಿಯಾಗಿದ್ದರು.
ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಒಡನಾಡಿಯಾಗಿದ್ದ ಇವರು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇವರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಈಗಾಗಲೇ ಕೊಳ್ಳೇಗಾಲದ ಕ್ರೀಡಾಂಗಣಕ್ಕೆ ೩ ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇನ್ನಷ್ಟು ಅನುದಾನ ತಂದು ಇದನ್ನು ಪೂರ್ಣಗೊಳಿಸಿ ಇದಕ್ಕೆ ಇವರ ಹೆಸರಿಡಲಾಗುವುದು ಎಂದರು. ದಲಿತ ಸಂಘಟನೆಯಲ್ಲಿ ಇವರ ಪಾತ್ರ ಹಿರಿದಾಗಿದೆ. ರಾಜ್ಯದಲ್ಲಿ ಇವರ ಹೆಸರಿಗೆ ಅಂತಹ ಒಡನಾಟ ಇರುವ ಅನೇಕ ಮೇಧಾವಿಗಳನ್ನು ಕರೆಯಿಸಿ, ಇವರ ಸ್ಮರಣೆಯನ್ನು ಮಾಡುವ ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರ, ಕೊಳ್ಳೇಗಾಲ ಹಾಗೂ ಯಳಂದೂರಿನಲ್ಲಿ ಅದ್ಧೂರಿಯಾಗಿ ಆಚರಿಸಲು ಯೋಜನೆ ರೂಪಿಸಬೇಕು. ಇದಕ್ಕೆ ನನ್ನೆಲ್ಲಾ ಸಹಕಾರವನ್ನು ನೀಡುತ್ತೇನೆ ಎಂದು ಆಯೋಜಕರಿಗೆ ಕಿವಿಮಾತು ಹೇಳಿದರು.
ಜೇತವನ ಬುದ್ಧ ವಿಹಾರದ ಮನೋರಖ್ಖಿತ ಭಂತೇಜಿ, ನಳಂದ ಬುದ್ಧವಿಹಾರದ ಬೋಧಿರತ್ನ ಭಂತೇಜಿ ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ವಡಗೆರೆ ಡಾ.ವಿ.ಎನ್. ಮಹದೇವಯ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ವಡಗೆರೆದಾಸ್, ಉದಯ್‌ಕುಮಾರ್. ಪಿ. ಸಂಘಸೇನ. ಕಮಲ್‌ನಾಗರಾಜು, ಭಾಗ್ಯ, ಆರ್. ಸುಮಿತ್ರ, ಮರಿಸ್ವಾಮಿ, ಹೊನ್ನೂರು ರಾಜೇಂದ್ರ, ಸುಂದರ್‌ಕಲಿವೀರ್, ಸಿ. ಶಂಕರ ಅಂಕನಶೆಟ್ಟಿಪುರ, ಕೆಸ್ತೂರು ಸಿದ್ದರಾಜು, ಸಿಪಿಐ ಶ್ರೀಕಾಂತ್, ಪಿಎಸ್‌ಐ ಆಕಾಶ್ ಸೇರಿದಂತೆ ಅನೇಕರು ಇದ್ದರು.