Thursday, September 11, 2025
Google search engine

Homeರಾಜ್ಯಸುದ್ದಿಜಾಲಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ: ಡಿ.ಕೆ. ಶಿವಕುಮಾರ್

ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನ: ಡಿ.ಕೆ. ಶಿವಕುಮಾರ್

ರಾಮನಗರ : ಸಿಎಸ್‌ಆರ್ ನಿಧಿಯಡಿ ರಾಜ್ಯಾದ್ಯಂತ ಗುಣಮಟ್ಟದ ಶಾಲೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಕಾನೂನು ರೂಪಿಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಭಾರಿ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರ ಅಭಿವೃದ್ಧಿ ಹಾಗೂ ಬೆಂಗಳೂರು ನಗರ ಉಸ್ತುವಾರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಅವರು ಸೆ.10ರ ಬುಧವಾರ ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕನಕಪುರ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಿಎಸ್‌ಆರ್ ನಿಧಿಯಡಿ ಅಗತ್ಯ ಮೂಲಭೂತ ಸೌಕರ್ಯಗಳುಳ್ಳ ಸರ್ಕಾರಿ ಶಾಲಾ ಕಟ್ಟಡಗಳ ನಿರ್ಮಾಣವನ್ನು ಈಗಾಗಲೇ ಕನಕಪುರ ತಾಲ್ಲೂಕಿನಲ್ಲಿ ಟೊಯೋಟಾ, ಪ್ರೆಸ್ಟೀಜ್, ಬಾಷ್ ಹಾಗೂ ಇತರೆ ಕಂಪನಿಗಳು ಶುರು ಮಾಡಿವೆ, ಅಂದಾಜು ಒಂದೊಂದು ಶಾಲೆಗೆ 10 ರಿಂದ 12 ಕೋಟಿ ರೂಪಾಯಿಗಳಾಗಲಿವೆ, ತಾಲ್ಲೂಕಿನಲ್ಲಿ ಮೂರು- ಮೂರು ಪಂಚಾಯತ್  ವ್ಯಾಪ್ತಿಯಲ್ಲಿ ಈ ಶಾಲೆಗಳನ್ನು ನಿರ್ಮಿಸುವ ಕ್ರಮವಹಿಸಲಾಗಿದೆ, ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳು ತಮ್ಮ ಲಾಭದ ಶೇ. 2 ರಷ್ಟು ಮೊತ್ತವನ್ನು ಈ ರೀತಿಯ ಸೇವಾ ಕಾರ್ಯಗಳಿಗೆ ಬಳಕೆ ಮಾಡುವ ಕಾಯ್ದೆಯಡಿ ಕನಕಪುರ ತಾಲೂಕಿನಲ್ಲಿ ಗುಣಮಟ್ಟದ ಶಾಲೆಗಳನ್ನು ನಿರ್ಮಿಸಲಾಗಿದೆ. ಅದರಂತೆಯೇ ಸಿಎಸ್‌ಆರ್ ನಿಧಿಯಡಿ ರಾಜ್ಯಾದ್ಯಂತ ಗುಣಮಟ್ಟದ ಸರ್ಕಾರಿ ಶಾಲೆಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಅದೇ ರೀತಿ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದೊಂದು ಶಾಲೆಯನ್ನು ದತ್ತು ತೆಗೆದುಕೊಂಡು ಆ ಮೂಲಕ ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸುವ ಬಗ್ಗೆಯೂ ಚಿಂತಿಸಲಾಗಿದೆ ಇದನ್ನು ಕೂಡ ರಾಜ್ಯಾದ್ಯಂತ ಅನುಷ್ಠಾನಗೊಳಿಸಾಲಾಗುವುದು. ಆಧುನಿಕ ಕಾಲದ ಶಿಕ್ಷಕರು ಪ್ರತಿದಿನವೂ ಅಪ್‌ಡೇಟ್ ಆಗಬೇಕು, ಅವರು ತಮ್ಮ ಐಕ್ಯೂ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಸದಾ ಚುರುಕಾಗಿರಬೇಕು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಶಿಕ್ಷಕರು ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಅಣಿಗೊಳಿಸಬೇಕು, ಅವರನ್ನು ಈ ಸ್ಪರ್ಧೆಗೆ ಸಜ್ಜುಗೊಳಿಸಬೇಕು, ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಐಟಿ ತಜ್ಞರಿದ್ದಾರೆ, ಅದೇ  ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಹದಿಮೂರು ಲಕ್ಷವಷ್ಟೇ ಐಟಿ ನಿಪುಣರಿದ್ದಾರೆ. ಇಂತಹ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ಕರೆ ನೀಡಿದರು.

ಶಿಕ್ಷಕರಿಗೆ ಪ್ರಪಂಚದಲ್ಲಿರುವ ಸ್ಥಾನ-ಮಾನ ಬೇರೆ ಯಾರಿಗೂ ಇಲ್ಲ. ಮನುಷ್ಯನಿಗೆ ವಿದ್ಯೆ, ವಿನಯ, ಉದ್ಯೋಗ, ಹಣ, ಧರ್ಮ, ಸುಖ ಇವೆಲ್ಲವೂ ವಿದ್ಯೆಯಿಂದಲೇ ಲಭಿಸುವುದು. ವಿದ್ಯೆಗೆ ಪರ್ಯಾಯವಾದ ಮತ್ತೊಂದು ವಸ್ತು ಜಗತ್ತಿನಲ್ಲಿ ಯಾವುದು ಇಲ್ಲ. ಸಮಾಜದಲ್ಲಿ ನ್ಯಾಯ, ನೀತಿ, ಧರ್ಮದಿಂದ ಅವರು ಬಾಳಲು ಶಿಕ್ಷಣ ಬಹಳ ಮುಖ್ಯ. ವಿದ್ಯೆ ಎಂಬುದು ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ. ತಾಲೂಕಿನ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ಶಿಕ್ಷಣವನ್ನು ನೀಡಲು ತಾಲ್ಲೂಕಿನ ಶಿಕ್ಷಕರು ಸಿದ್ದರಾಗಬೇಕು, ತಾಯಿ ಉಸಿರು ನೀಡುತ್ತಾಳೆ, ತಂದೆ ಹೆಸರು ನೀಡುತ್ತಾನೆ, ಆದರೆ ಗುರು ಉಸಿರು ಇರುವವರೆಗೂ ಹೆಸರು ಕಾಪಾಡುತ್ತಾನೆ. ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಜೀವನದಲ್ಲಿ ಮಕ್ಕಳಿಗೆ ಗುರಿ ಹಾಗೂ ಗುರು ಅತ್ಯಂತ ಪ್ರಮುಖವಾದವುಗಳು ಎಂದರು.

ವಿಧಾನ ಪರಿಷತ್ ಶಾಸಕರಾದ ಪುಟ್ಟಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ, ನಿವೃತ್ತ ಶಿಕ್ಷಕರು, ಮುಖ್ಯೋಪಾದ್ಯಾಯರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಎಸ್. ರವಿ, ಮಾಜಿ ವಿಧಾನ ಸಭಾ ಸದಸ್ಯರಾದ ಅಶ್ವಥ್, ಕನಕಪುರ ತಾಲ್ಲೂಕಿನ ನಗರಸಭೆ ಅಧ್ಯಕ್ಷರಾದ ಹೇಮಾ ರಾಜ್, ಮುಖಂಡರುಗಳಾದ ವಿಜಯ ದೇವರು, ಶ್ರೀಕಂಠ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ದಿಲೀಪ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular