ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಾಬು ಜಗಜೀವನ್ ರಾಂ ಭವನದ ಮುಂದುವರೆದ ಕಟ್ಟಡ ಕಾಮಗಾರಿ ಕಳಪೆಯಿಂದ ಕೂಡಿದ್ದು, ಸುತ್ತುಗೋಡೆ ಹಾಗೂ ಅಡುಗೆ ಮನೆ ಹಣ ದುರುಪಯೋಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸುವಂತೆ ಒತ್ತಾಯಿಸಿ ತಾಲೂಕು ಆದಿ ಜಾಂಬವ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಹಾಗು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ಹೊರವಲಯದ ಊಟಿ ರಸ್ತೆಯಲ್ಲಿ ಕೆ.ಆರ್.ಡಿ.ಎಲ್ ವತಿಯಿಂದ ಡಾ.ಬಾಬು ಜಗಜೀವನ ರಾಂ ಭವನದ ಮುಂದುವರೆದ ಕಾಮಗಾರಿ ಕೆಲಸ ನಡೆಯುತ್ತಿದೆ. ಆದರೆ ಇದು ತುಂಬಾ ಕಳಪೆಯಿಂದ ನಿರ್ಮಾಣವಾಗುತ್ತಿದ್ದು, ಗೋಡೆಗಳು ಹಾಗೂ ಪ್ಲಾಸ್ಟರಿಂಗ್‍ಗೆ ನೀರು ಹಾಕಿರುವುದಿಲ್ಲ. ಕಡಿಮೆ ದರ್ಜೆಯ ಲೋಕಲ್ ಬಣ್ಣ ಹೊಡೆಯಲಾಗಿದೆ. ಬಾಗಿಲು, ಚೌಕಟ್ಟುಗಳು ಸರಿಯಾದ ಸೈಜ್ ಇಲ್ಲ ಕಳಪೆಯಿಂದ ಕೂಡಿದೆ ಎಂದು ದೂರಿದರು.
ಆರತಕ್ಷತೆಯ ಮೇಲ್ಛಾವಣಿ ಮಳೆ ಬಂದಾಗ ನೀರು ನಿಂತು ಸೋರುತ್ತಿರುತ್ತದೆ. ಹಿಂದೆ ಹಾಕಿದ್ದ ಕಿಟಕಿ, ಬಾಗಿಲುಗಳು ತೀರ ಹಳೆಯದಾಗಿ ಶಿಥಿಲಾವಸ್ಥೆ ತಲುಪಿದೆ. ಊಟದ ಹಾಲಿನ ನೆಲ ಮಾಳಿಗೆಯಲ್ಲಿರುವ ಜಾಗ ಇಳಿಯಲು ತುಂಬಾ ಆಳವಾಗಿದೆ. ಜೊತೆಗೆ ಅವೈಜ್ಞಾನಿಕವಾಗಿದೆ. ಈ ಹಿಂದೆ ತೆಗೆದಿದ್ದ ಚೌಕಟ್ಟುಗಳು ಕಬ್ಬಿಣದ ಸಾಮಾನುಗಳು ದುರುಪಯೋಗವಾಗಿದೆ. ಸರಿಯಾದ ನೀರಿನ ಸಂಪ್, ಬೋರ್, ಅಡುಗೆ ಮನೆ, ಶೌಚಾಲಯ, ಸ್ನಾನದ ಮನೆ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.
ಡಾ.ಬಾಬು ಜನಗಜೀವನ್ ರಾಂ ಭವನ ಕಾಮಗಾರಿ ಕೈಗೆತ್ತಿಕೊಂಡು ಸುಮಾರು 10 ವರ್ಷ ಕಳೆದಿದೆ. ಅಂದಿನಿಂದ ಈವರೆಗೆ ಹಲವು ಮಂದಿ ಅಧಿಕಾರಿಗಳು ತಮಗಿಷ್ಟ ಬಂದ ರೀತಿಯಲ್ಲಿ ಎಸ್ಟಿಮೇಟ್ ಮಾಡಿ, ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಿದ್ದಲ್ಲಿ ಈ ಹಿಂದೆ ಸುತ್ತುಗೋಡೆ, ಅಡುಗೆ ಮನೆ, ಶೌಚಾಲಯಕ್ಕೆ ಮಂಜೂರಾಗಿದ್ದ ಹಣ ಏನಾಯಿತು?. ಈವರೆವಿಗೆ ಭವನಕ್ಕೆ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಎಷ್ಟು ಹಣ ಮಂಜುರಾಗಿತ್ತು ಎಂಬುದರ ಲೆಕ್ಕವೇ ಇಲ್ಲ.
ಪ್ರಸ್ತುತ ಗುತ್ತಿಗೆದಾರ ತರಾತುರಿಯಲ್ಲಿ ಕೆಲಸ ಮುಗಿಸಿ, ಹಣ ಪಾವತಿಸಲು ಮುಂದಾಗಿದ್ದಾರೆ. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ತಾಲೂಕು ಆದಿಜಾಂಬವ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಹಸಗೂಲಿ ಸಿದ್ದಯ್ಯ, ಅಧ್ಯಕ್ಷ ಮಳವಳ್ಳಿ ಮಹದೇವಯ್ಯ, ಕಾರ್ಯದರ್ಶಿ ಕಲ್ಲಿಗೌಡನಹಳ್ಳಿ ಸಿದ್ದರಾಜು, ವಕೀಲ ಹಾಗೂ ಕಾನೂನು ಸಲಹೆಗಾರ ಹಂಗಳ ಸಿದ್ದೇಶ್, ಉಪಾಧ್ಯಕ್ಷ ಶಿವಣ್ಣ, ಮುಖಂಡರಾದ ಗುರುಲಿಂಗಯ್ಯ ಜಿಲ್ಲಾಧಿಕಾರಿಗಳೊಹೆ ದೂರು ನೀಡಿ ಮನವಿ ಮಾಡಿದ್ದಾರೆ.