ಹನಗೋಡು: ಹಣದ ಆಸೆಗೆ ಕೈ ಹಿಡಿದ ಪತಿಯನ್ನೆ ಕೊಲೆಗೈದು ಹುಲಿ ದಾಳಿ ಎಂದು ಬಿಂಬಿಸಲು ಹೋಗಿದ್ದ ಹೈನಾತಿ ಹೆಂಡತಿಯ ಸುಳ್ಳಿನ ಕಟ್ಟುಕತೆಯನ್ನು ಭೇದಿಸುವಲ್ಲಿ ಹುಣಸೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಚಿಕ್ಕಹೆಜ್ಜೂರು ಗ್ರಾಮದ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕಡಂಪು ಗ್ರಾಮದ ವೆಂಕಟಸ್ವಾಮಿ (45) ಕೊಲೆಯಾದ ದುರ್ದೈವಿಯಾಗಿದ್ದು ಈತನ ಪತ್ನಿ ಸಲ್ಲಾಪುರಿ (40) ತನ್ನ ಕೈಹಿಡಿದ ಪತಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾಳೆ.
ಹಲವು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರ ಶಿಕ್ಷಣಕ್ಕಾಗಿ ಬಿಡದಿಯಲ್ಲಿರುವ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು. ಕಳೆದ ಆರು ತಿಂಗಳ ಹಿಂದಷ್ಟೆ ಬೆಂಗಳೂರಿನ ರವಿಕುಮಾರ್ ಮತ್ತು ಅರುಣ್‌ಕುಮಾರ್ ರವರ ಒಡೆತನದ ಚಿಕ್ಕಹೆಜ್ಜೂರಿನಲ್ಲಿರುವ 4.10 ಎಕರೆ ಅಡಿಕೆ ತೋಟವನ್ನು ನಿರ್ವಹಿಸುವ ಕೆಲಸವನ್ನು ನಿರ್ವಹಿಸಲು ಮಾಸಿಕ 18 ಸಾವಿರ ರೂ. ವೇತನವನ್ನು ಈ ದಂಪತಿಗಳಿಗೆ ನಿಗದಿಪಡಿಸಿ ತೋಟದೊಳಗಿರುವ ಮನೆಯನ್ನು ವಾಸಕ್ಕೆ ನೀಡಿದ್ದರು.
ಕಾಡಂಚಿನ ಗ್ರಾಮಗಳಲ್ಲಿ ಆಗಿದ್ದಾಂಗೆ ಜನ ಜಾನುವಾರುಗಳ ಮೇಲೆ ಹುಲಿ ಚಿರತೆಗಳ ದಾಳಿ ಆಗುತ್ತಿರುವ ಬಗ್ಗೆ ಹಾಗೂ ಹುಲಿ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ ಸರ್ಕಾರ ನೀಡುವ ಪರಿಹಾರದ ಬಗ್ಗೆ ಅಕ್ಕ ಪಕ್ಕದವರು ಕೆಲಸಕ್ಕೆ ಬರುತಿದ್ದವರಿಂದ ಮಾಹಿತಿ ಪಡೆದಿದ್ದ ಸಲ್ಲಾಪುರಿ ಹಣದ ದುರಾಸೆ ಬಿದ್ದು ಸೆ. 08 ಸೋಮವಾರ ರಾತ್ರಿ ತನ್ನ ಗಂಡ ವೆಂಕಟಸ್ವಾಮಿಗೆ ವಿಷ ಬೆರೆಸಿದ ಆಹಾರ ನೀಡಿ ಸಾಯಿಸಿದ್ದಾಳೆ. ವಿಷ ಆಹಾರ ಸೇವಿಸಿದ ವೆಂಕಟಸ್ವಾಮಿ ಸತ್ತ ನಂತರ ಅವನ ದೇಹವನ್ನು ಮನೆಯಿಂದ ಹೊರಗೆ ಎಳೆದೊಯ್ದು ಮನೆಯ ಪಕ್ಕದಲ್ಲಿದ್ದ ಸಗಣಿ ಗುಂಡಿಯನ್ನು ಐದು ಅಡಿ ಆಳ ಅಗೆದು, ಶವವನ್ನು ಹೂತು ಹಾಕಿ ಸಗಣಿ, ಎಲೆಗಳು, ಜೋಳದ ಹುಲ್ಲು ಮತ್ತಿತರ ತ್ಯಾಜ್ಯಗಳಿಂದ ಮುಚ್ಚಿಹಾಕಿದ್ದಾಳೆ.
ನಂತರ ಸೆ.09ರ ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಹುಲಿಯೊಂದು ತನ್ನ ಗಂಡ ವೆಂಕಟಸ್ವಾಮಿಯನ್ನು ಕೊಂದು ಅವನ ದೇಹವನ್ನು ಜೋಳದ ಹೊಲದ ಮೂಲಕ ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿದೆ ಎಂದು ಕಥೆ ಕಟ್ಟಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾಳೆ.
ಪ್ರಕರಣವನ್ನು ಹುಣಸೂರು ಗ್ರಾಮಾಂತರ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡು ಶೋಧ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಮುನಿಯಪ್ಪ ತೋಟದಲ್ಲಿ ಅಳವಡಿಸಲಾದ ಸಿ.ಸಿ.ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಅಪರಾಧದ ಸಮಯದಲ್ಲಿ ಸಲ್ಲಾಪುರಿಯ ಚಲನವಲನಗಳನ್ನು ಗಮನಿಸಿ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಆಕೆಯ ಹೇಳಿಕೆ ಮತ್ತು ದೃಢವಾದ ಪುರಾವೆಗಳನ್ನು ಸಂಗ್ರಹಿಸಿ ತನಿಖೆ ತೀವ್ರಗೊಳಿಸಿದ ಪರಿಣಾಮ ಹಣದ ದುರಾಸೆಗೆ ಬಿದ್ದು ಪತಿಯನ್ನೆ ಕೊಲೆಗೈದು ಶವವನ್ನು ತಿಪ್ಪೆ ಗುಂಡಿಯಲ್ಲಿ ಹೂತಕ್ಕಿರುವುದಾಗಿ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾಳೆ.
ಶವ ಪರೀಕ್ಷೆಗಾಗಿ ಶವವನ್ನು ಮೈಸೂರಿನ ಕೆ ಆರ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ.
ಘಟನಾ ಸ್ಥಳಕ್ಕೆ ಮೈಸೂರು ಅಡಿಷನಲ್ ಎಸ್ಪಿ ಮಲ್ಲಿಕ್, ಹುಣಸೂರು ಡಿ ವೈ ಎಸ್ ಪಿ ಗೋಪಾಲಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.