ವರದಿ: ಸ್ಟೀಫನ್ ಜೇಮ್ಸ್
ಇತ್ತೀಚೆಗೆ ವಿದ್ಯುತ್ ದರ ಏರಿಕೆಯಾಗಿದೆ. ಜನಸಾಮಾನ್ಯರು ಅದರಿಂದ ಹೊರಬರೋ ಅಷ್ಟರೊಳಗಾಗಿಯೇ ಬೆಸ್ಕಾಂ ಮತ್ತೊಮ್ಮೆ ದರ ಹೆಚ್ಚಳದ ಪ್ರಸ್ತಾವನೆಯನ್ನು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದೆ. ವಾಣಿಜ್ಯ ಹಾಗೂ ಕೈಗಾರಿಕಾ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಈಗಾಗಲೇ ದರ ಏರಿಕೆಗೊಳಗಾಗಿದ್ದ ವಿದ್ಯುತ್ ಬಳಕೆದಾರರು, ಇದೀಗ ಮತ್ತೊಂದು ಹೊರೆ ಎದುರಿಸಬೇಕಾದ ಸ್ಥಿತಿ ಉಂಟಾಗಿದೆ. ಬೆಸ್ಕಾಂ ನೂತನ ಪ್ರಸ್ತಾವನೆ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ದರ ಕಡಿತಗೊಳಿಸಲಿದೆ. ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಪ್ರತಿ ಯೂನಿಟ್‌ಗೆ 10 ಪೈಸೆ ಇಂದ 1 ರೂ. ವರೆಗೆ ಹೆಚ್ಚಳ ಮಾಡುವ ಯತ್ನ ನಡೆಯುತ್ತಿದೆ.
ಈ ಬೆಳವಣಿಗೆಗೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ತೀವ್ರ ಪ್ರತಿಕ್ರಿಯೆ ನೀಡಿದೆ. ಯಾರದೋ ಹೊರೆ ಮತ್ತೊಬ್ಬರ ಮೇಲೆ ಹಾಕುವುದು ನ್ಯಾಯವಲ್ಲ. ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮಗಳ ಮೇಲಿನ ಈ ಹೊರೆಯು ಅರ್ಥಶಾಸ್ತ್ರೀಯವಾಗಿ ಅಸಂಗತ ಎಂಬ ಸೂಚನೆ ನೀಡಿದೆ.
ರೈತರಿಗೆ ನೀರಾವರಿ ಉದ್ದೇಶಕ್ಕಾಗಿ ಪಂಪ್‌ಸೆಟ್‌ಗಳ ಮೂಲಕ ಸರಬರಾಜು ಆಗುವ ವಿದ್ಯುತ್ ಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕಾದರೂ, ಇದರಲ್ಲಿ ವಿಳಂಬವಾಗುತ್ತಿರುವುದಾಗಿ ವರದಿಯಾಗಿದೆ. ರಾಜ್ಯ ಸರ್ಕಾರ ಈ ಬಾರಿಗೆ ಬಜೆಟ್‌ನಲ್ಲಿ ನೀಡಿರುವ ಮೊತ್ತ ₹16,021 ಕೋಟಿ ಮಾತ್ರ. ಆದರೆ ಅಗತ್ಯವಿರುವ ₹2,36,247 ಕೋಟಿಗಳಿಗೆ ಹೋಲಿಸಿದರೆ, ಇನ್ನೂ ₹1,214.12 ಕೋಟಿ ಕೊರತೆಯಿದೆ ಎಂದು ಅಂದಾಜಿಸಲಾಗಿದೆ.
ಈ ಕೊರತೆಯನ್ನು ಪೂರೈಸಲು ಬೆಸ್ಕಾಂ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ದರ ಏರಿಕೆಗೆ ಒತ್ತಡ ತರುತ್ತಿರುವುದಾಗಿ ತಿಳಿದುಬಂದಿದೆ. FKCCI ಅಭಿಪ್ರಾಯ ಪಟ್ಟಿರುವಂತೆ, ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದರ ಪರಿಣಾಮವಾಗಿ, ಅಂತಿಮ ಗ್ರಾಹಕರ ಮೇಲೆಯೂ ಬೆಲೆ ಏರಿಕೆಯ ಹೊರೆ ಬರುವ ಸಾಧ್ಯತೆ ಹೆಚ್ಚಾಗಿದೆ.