ಬಳ್ಳಾರಿ: ಉದ್ಯಮಿ ಕುಮಾರಸ್ವಾಮಿ ಹಾಗೂ ಮಗ ಗೋವಿಂದರಾಜು ಮನೆಗಳ ಮೇಲೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಪರಿಶಿಷ್ಟ ಪಂಗಡಗಳ ಇಲಾಖೆ ಅಧೀನದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ. ಈ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನಿಗಮದಿಂದ ಸುಮಾರು 88 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪವಿದ್ದು, ಗೋವಿಂದ್ ಅವರ ಹೆಸರು ಸಹ ಸೇರಿದೆ . ಹೀಗಾಗಿ ಹಗರಣದ ತನಿಖೆಯಲ್ಲಿ ಸಿಬಿಐಯ ಈ ಕ್ರಮವು ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಕುಮಾರಸ್ವಾಮಿ ಪುತ್ರ ಗೋವಿಂದರಾಜು ಬಳ್ಳಾರಿಯ ಹಾಲಿ ಕಾರ್ಪೊರೇಟರ್ ಆಗಿದ್ದು, ಬಳ್ಳಾರಿಯ ಗಾಂಧಿನಗರದಲ್ಲಿರುವ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಿಂದರಾಜು ಖಾತೆಗೆ ನೆಕ್ಕಂಟಿ ನಾಗರಾಜ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಸಂಬಂಧ ಗೋವಿಂದರಾಜು ಮನೆಯಲ್ಲಿ ಸಿಬಿಐ ದಾಖಲೆ ಪರಿಶೀಲನೆ ನಡೆಸುತ್ತಿದೆ.