ಯಳಂದೂರು: ರೋಟರಿ ಕ್ಲಬ್ ವಿಶ್ವಮಟ್ಟದಲ್ಲಿ ಪೊಲೀಯೋವನ್ನು ಬುಡಸಮೇತ ನಿರ್ಮೂಲನೆಗೊಳಿಸಲು ಪಣ ತೊಟ್ಟಿದೆ. ಪಾಕಿಸ್ತಾನ, ಆಪ್ಘಾನಿಸ್ತಾನದಲ್ಲಿ ಕೇವಲ ೨೩ ಮಂದಿ ಪೋಲಿಯೋ ರೋಗಿಗಳಿದ್ದಾರೆ. ಇದು ನಿರ್ಮೂಲನೆಗೊಂಡರೆ ಇಡೀ ವಿಶ್ವ ಪೊಲೀಯೋ ಮುಕ್ತವಾಗುತ್ತದೆ ಈ ಶ್ರೇಯ ರೋಟರಿ ಸಂಸ್ಥೆಗೆ ಸೇರುತ್ತದೆ ಎಂದು ರೋಟರಿ ಕ್ಲಬ್‌ನ ಜಿಲ್ಲಾ ಗೌರ್‍ನರ್ ಪಿ.ಕೆ. ರಾಮಕೃಷ್ಣ ಮಾಹಿತಿ ನೀಡಿದರು.
ಅವರು ಮಂಗಳವಾರ ಪಟ್ಟಣದಲ್ಲಿ ರೋಟರಿ ಕ್ಲಬ್‌ನ ನಾಮಫಲಕ ಅನಾವರಣ, ಗುಂಬಳ್ಳಿ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಬಿಳಿಗಿರಿರಂಗನಬೆಟ್ಟದ ಅಂಗನವಾಡಿ ಕೇಂದ್ರಕ್ಕೆ ಚೇರ್, ಟೇಬಲ್, ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಿ ಸಂಸ್ಥೆಯು ಪೋಲಿಯೋ ನಿರ್ಮೂಲನೆಗೆ ಇದುವರೆಗೂ ೬೦೦ ಮಿಲಿಯನ್ ಡಾಲರ್ ಹಣವನ್ನು ವಿನಿಯೋಗಿಸಿದೆ. ಈಗ ಮಲೇರಿಯಾ ನಿರ್ಮೂಲನೆಗೆ ೨೦ ಲಕ್ಷ ಡಾಲರ್ ಯೋಜನೆಯನ್ನು ರೂಪಿಸಿ ಕೆಲಸ ಮಾಡುತ್ತಿದೆ. ಶೇ. ೮೦ ರಷ್ಟು ಈ ರೋಗವೂ ನಿರ್ಮೂಲನೆಯಾಗಿದೆ. ಜೊತೆಗೆ ಭಾರತದಲ್ಲಿ ರೈತರಿಗೆ ನೆರವಾಗುವ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತರಬೇತಿ, ಕೆಲಸಗಳನ್ನು ಪಡೆದುಕೊಳ್ಳಲು ಭಾರತದ ಪೂನಾದಲ್ಲಿ ೨ ವರ್ಷಗಳ ತರಬೇತಿ ನೀಡುವ ಕಾಲೇಜನ್ನು ತೆರೆದಿದೆ.
ಇದರೊಂದಿಗೆ ಪ್ರತಿ ಗ್ರಾಮಗಳಿಗೂ ತೆರಳಿ ಇಲ್ಲಿನ ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅನೇಕ ಕೊಡುಗೆಗಳನ್ನು ನೀಡುತ್ತಿದೆ. ಪರಿಸರ ಜಾಗೃತಿ ಮೂಡಿಸುವ, ಗಿಡ ನೆಡುವ, ಜಾಗತಿಕ ತಾಪಮಾನವನ್ನು ತಡೆಯುವ ಜಾಗೃತಿ ಸೇರಿದಂತೆ ಇತರೆ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಯಳಂದೂರು ತಾಲೂಕಿನ ರೋಟರಿ ಗ್ರೀನ್‌ವೇ ಸಂಸ್ಥೆ ಮರು ಸ್ಥಾಪನೆಯಾದ ಬಳಿಕ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ನಮ್ಮ ಸಂಸ್ಥೆಯ ಸದಸ್ಯರಿಗೆ ತರಬೇತಿ ನೀಡುವ ಕೆಲಸಗಳನ್ನು ಮಾಡುತ್ತಿದೆ. ಹಾಲಿ ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ರವರು ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದು ಹೀಗೆ ನಿರಂತರವಾಗಿ ಸಾಗಲಿ ಎಂದು ಮನವಿ ಮಾಡಿದರು.
ಜಿಲ್ಲಾ ಉಪ ಗೌರ್‍ನರ್ ಬಸವರಾಜು, ಮಾಜಿ ಸಹಾಯಕ ಗೌರ್‍ನರ್ ಪುಟ್ಟಅರಸಶೆಟ್ಟಿ ತಾಲೂಕು ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ಕಾರ್ಯದರ್ಶಿ ಪುಟ್ಟರಾಜು ಖಜಾಂಚಿ ಗೌಡಹಳ್ಳಿ ರವಿ, ವೈ.ಕೆ.ಮೋಳೆ ನಾಗರಾಜು, ಸೂರ್ಯನಾರಾಯಣ, ರಿತೇಷ್, ನಟರಾಜು, ಬಿ.ಟಿ. ಶ್ರೀನಿವಾಸ್, ಶಿವಕುಮಾರ್, ಕೃಷ್ಣಪುರ ದೇವರಾಜು, ಗಣಿಗನೂರು ಬಂಗಾರು, ರುದ್ರಯ್ಯ, ಪ್ರಕಾಶ್, ಅನಿಲ್, ನಟರಾಜು, ಮಹದೇವಶೆಟ್ಟಿ ಸೇರಿದಂತೆ ಅನೇಕರು ಇದ್ದರು.