ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ತಾಲೂಕಿನ ತಿಪ್ಪೂರು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಕನುಗನಹಳ್ಳಿ ಗ್ರಾಮದ ಕೆ.ಸಿ.ರಮ್ಯಾವಿಶ್ವನಾಥ್ ಆಯ್ಕೆಯಾದರು.
ಈವರೆಗೆ ಅಧ್ಯಕ್ಷರಾಗಿದ್ದ ಕನಕನಗರದ ರಾಜೇಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗ್ರಾಮ ಪಂಚಾಯ್ತಿ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಕೆ.ಸಿ.ರಮ್ಯಾವಿಶ್ವನಾಥ್ ಮತ್ತು ಕಾಂಗ್ರೆಸ್ ಬೆಂಬಲಿತರಾಗಿ ಡೆಗ್ಗನಹಳ್ಳಿ ಗ್ರಾಮದ ಡಿ.ಜೆ.ಮಹದೇವ್ ನಾಮಪತ್ರ ಸಲ್ಲಿಸಿದ್ದರು.
ಪಂಚಾಯ್ತಿಯಲ್ಲಿ ಒಟ್ಟು ೧೮ ಸದಸ್ಯರಿದ್ದು, ಆನಂತರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಕೆ.ಸಿ.ರಮ್ಯಾವಿಶ್ವನಾಥ್ ಮತ್ತು ಡಿ.ಜೆ.ಮಹದೇವ ತಲಾ ೯ ಮತಗಳನ್ನು ಪಡೆದು ಸಮಬಲ ಸಾಧಿಸಿದರು.
ಚುನಾವಣಾಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೆಚ್.ಎಲ್.ಶಂಕರಮೂರ್ತಿ ಅಂತಿಮವಾಗಿ ಫಲಿತಾಂಶವನ್ನು ಲಾಟರಿ ಮೂಲಕ ಆಯ್ಕೆ ಮಾಡಲು ನಿರ್ಧರಿಸಿದಾಗ ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿದರು.
ಲಾಟರಿಯಲ್ಲಿ ಕೆ.ಸಿ.ರಮ್ಯಾವಿಶ್ವನಾಥ್ ಜಯಶಾಲಿಯಾದರೆ, ಡಿ.ಜೆ.ಮಹದೇವ್ ಪರಾಭವಗೊಂಡರು. ಇದರಿಂದ ಈವರೆಗೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಗ್ರಾಮ ಪಂಚಾಯ್ತಿ ಜೆಡಿಎಸ್ ಪಾಲಾಯಿತು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷೆ ಡಿ.ಕೆ.ಅನಿತಾ, ಮಧು, ನೀಲಯ್ಯ, ಎ.ಪಿ.ದಾಕ್ಷಾಯಿಣಿ, ಅನುಸೂಯ, ಹೆಚ್.ಆರ್.ಭವ್ಯ, ಪಿ.ರಾಮಕೃಷ್ಣೇಗೌಡ, ಶೋಭಾ, ಟಿ.ಎನ್.ಸತ್ಯನಾರಾಯಣ, ಟಿ.ಸಿ.ಭಾಸ್ಕರನಾಯಕ, ಭಾರತಿ, ರತ್ನಮ್ಮ, ಶಿವಣ್ಣ, ಶೈಲಜಾ, ಶೋಭಕ್ಕ, ರಾಜೇಗೌಡ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಿ.ಎಸ್.ಧನಂಜಯ ಹಾಜರಿದ್ದರು.
ನೂತನ ಅಧ್ಯಕ್ಷೆ ಕೆ.ಸಿ.ರಮ್ಯಾವಿಶ್ವನಾಥ್ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ನಾನು ಅಧ್ಯಕ್ಷೆಯಾಗಿ ಆಯ್ಕೆಯಾಗಲು ಕಾರಣಕರ್ತರಾದ ವರಿಷ್ಠ ಮಾಜಿ ಸಚಿವ ಸಾ.ರಾ.ಮಹೇಶ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಎಲ್ಲಾ ಸದಸ್ಯರಿಗೂ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ಅಭಿವೃದ್ಧಿ ಕಾರ್ಯಗಳಿಗೆ ಸರ್ವರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನೂತನ ಅಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಗ್ರಾಮ ಪಂಚಾಯ್ತಿ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಜೆಡಿಎಸ್ ಮುಖಂಡರಾದ ಕೆ.ಜೆ.ಕುಚೇಲ, ಡಿ.ಎಸ್.ಯೋಗೇಶ್, ಬಿ.ಸಂದೇಶ್, ಕೆ.ಪಿ.ಮಹೇಶ್, ನಂದಕುಮಾರ್, ಶಿವಣ್ಣ, ವೆಂಕಟೇಶ್, ವಿಷ್ಣುವರ್ಧನ್, ಮಹದೇವ್, ಸೋಮಶೇಖರ್, ಸಾಗರ್, ತಿಮ್ಮೇಗೌಡ, ಜಿತೇಂದ್ರ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.