ಬೆಂಗಳೂರು: ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಕೂಡಲೇ ಪೂರೈಕೆ ಮಾಡುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪತ್ರ ಬರೆದಿದ್ದಾರೆ.
ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು. ಕರ್ನಾಟಕದಲ್ಲಿ ಮುಂಗಾರು ಬೇಗ ಪ್ರಾರಂಭವಾಗಿದ್ದು ಸರಾಸರಿಗಿಂತ ಶೇ.3ರಷ್ಟು ಹೆಚ್ಚು ಮಳೆಯಾಗಿದ್ದರಿಂದ ಬಿತ್ತನೆ ನಿರೀಕ್ಷೆಗೂ ಮುಂಚೆ ಚಾಲನೆಯಾಗಿದೆ.
2025-26ನೇ ಸಾಲಿನಲ್ಲಿ ರಾಜ್ಯದಲ್ಲಿ 114.40 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 160.68 ಲಕ್ಷ ಟನ್ ಆಹಾರಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದನಾ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿಗೆ 82.50 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು 81.85 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ.
ಮುಂಗಾರು ಹಂಗಾಮಿನಲ್ಲಿ 26.77 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಲಾಗಿದೆ. 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಕೊರತೆ ಉಂಟಾಗಿದೆ.ರಾಜ್ಯಗಳಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು. ಕರ್ನಾಟಕದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಿಲ್ಲ.
ಏಪ್ರಿಲ್ ನಿಂದ ಸೆಪ್ಟೆಂಬರ್ 2025ರವರೆಗೆ ಕರ್ನಾಟಕಕ್ಕೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಬಾಕಿಯಿದೆ. ಕೇಂದ್ರ ಸರ್ಕಾರದಿಂದ ರಸಗೊಬ್ಬರ ಪೂರೈಕೆಯಲ್ಲಿ ಆಗಿರುವ ಕೊರತೆಯಿಂದ ಕರ್ನಾಟಕ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿದೆ. ಈ ವರ್ಷ ಯೂರಿಯಾ ಪೂರೈಕೆ ಪ್ರಮಾಣ ಶೇ.50ರಷ್ಟು ಕಡಿಮೆ ಆಗಿದೆ.
ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕಕ್ಕೆ ಪೂರೈಸಬೇಕಿದ್ದ ಯೂರಿಯಾ ರಸಗೊಬ್ಬರವನ್ನು ಆದಷ್ಟು ಶೀಘ್ರದಲ್ಲಿ ಪೂರೈಸಬೇಕೆಂದು ಕರ್ನಾಟಕ ರಾಜ್ಯದ ರೈತರ ಪರವಾಗಿ ಒತ್ತಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.