ವರದಿ: ಸ್ಟೀಫನ್ ಜೇಮ್ಸ್
ಬೆಂಗಳೂರು: ಸೆಪ್ಟೆಂಬರ್ 22ರಿಂದ ಕರ್ನಾಟಕದಾದ್ಯಂತ ಜಾತಿ ಗಣತಿ ಪ್ರಕ್ರಿಯೆ ಆರಂಭವಾಗಲಿದೆ. ಸಮೀಕ್ಷೆಯಲ್ಲಿ 60 ಪ್ರಶ್ನೆಗಳು ಇರಲಿದ್ದು, ರಾಜ್ಯದಲ್ಲಿ ಎಷ್ಟು ಜಾತಿಗಳು, ಉಪಜಾತಿಗಳಿವೆ ಎಂಬುದರ ಪಟ್ಟಿಯನ್ನೂ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಜಾತಿಗಳು ಇರುವುದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇದರ ಸುತ್ತ ಹಲವು ಗೊಂದಲಗಳು ಮತ್ತು ವಿವಾದಗಳೂ ಸೃಷ್ಟಿಯಾಗಿವೆ. ಮತಾಂತರಗೊಂಡವರ ಜಾತಿಯನ್ನು ಉಲ್ಲೇಖಿಸಿರುವ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ತಕರಾರು ಎತ್ತಿದ್ದರೆ, ಮತ್ತೊಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವೂ ಮುನ್ನೆಲೆಗೆ ಬಂದಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ರಾಜ್ಯದಲ್ಲಿ 1500ಕ್ಕೂ ಹೆಚ್ಚು ಜಾತಿ, ಉಪ ಜಾತಿಗಳು ಇರುವುದು ಗೊತ್ತಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1,561 ಜಾತಿ-ಉಪಜಾತಿಗಳಿವೆ. ಕರ್ನಾಟಕ ಜಾತಿ ಗಣತಿ ಹೇಗೆ ನಡೆಯಲಿದೆ.
ಜಾತಿ ಗಣತಿ ಸೆಪ್ಟೆಂಬರ್ 22 ಸೋಮವಾರದಿಂದ ಶುರುವಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಈಗಾಗಲೇ 2 ಕೋಟಿ ಮನೆಗಳಿಗೆ ಗಣತಿ ಸಿಬ್ಬಂದಿ ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಗಣತಿಗೆ ಸಿಬ್ಬಂದಿ ಬಂದ ವೇಳೆ ಮನೆಯಲ್ಲಿ ಇಲ್ಲದವರು ಆಯೋಗದ ಸಹಾಯವಾಣಿ ಸಂಖ್ಯೆ 80507 70004ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ kacbckarnataka.govt.in ವೆಬ್ಸೈಟ್ ಮೂಲಕವೂ ಸರ್ವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಮೊದಲಿಗೆ ಆಶಾ ಕಾರ್ಯಕರ್ತರು ಮನೆ ಮನೆಗೂ ಸ್ಟಿಕ್ಕರ್ ಅಂಟಿಸಿ 60 ಪ್ರಶ್ನೆಗಳಿರುವ ಬುಕ್ಲೆಟ್ ಕೊಡಲಿದ್ದಾರೆ. ಬಳಿಕ ಶಿಕ್ಷಕರು ಗಣತಿಗೆ ಮನೆ ಮನೆಗೂ ತೆರಳಿ, ಬುಕ್ಲೆಟ್ನಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ಕಲೆ ಹಾಕಲಿದ್ದಾರೆ. ಸರ್ಕಾರದ ಈ ಕ್ರಮವು ರಾಜಕೀಯ ಉದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಆರೋಪಿಸಿದ್ದರೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ಬಿಜೆಪಿಯ ಆರೋಪಗಳು ಮತ್ತು ವಿರೋಧವು ಮುಂದುವರಿದಿದ್ದು, ಈ ವಿಷಯ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶ ಮತ್ತು ಅದರ ಪರಿಣಾಮಗಳು ಭವಿಷ್ಯದಲ್ಲಿ ಹೇಗೆ ಬೆಳವಣಿಗೆ ಹೊಂದುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.